ಭಾರತದ ಕೈಗಾರಿಕೆಗಳು

17ನೆಯ ಶತಮಾನದಲ್ಲೇ ಭಾರತ ಪ್ರಪಂಚದ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಗಳ ಪೈಕಿ ಒಂದೆನಿಸಿತ್ತು. ಆಗಲೇ ಭಾರತ ಬಗೆಬಗೆಯ ಕಲಾತ್ಮಕ ಹಾಗೂ ಕುಶಲ ವಸ್ತುಗಳನ್ನೂ ಹತ್ತಿ ಮತ್ತು ರೇಷ್ಮೆ ಬಟ್ಟೆ, ನೀಲಿ, ಪೆಟ್ಲುಪ್ಪು ಮೊದಲಾದವನ್ನು ಪೋರ್ಚುಗಲ್, ಹಾಲೆಂಡ್ ಮತ್ತು ಇಂಗ್ಲೆಂಡ್‍ಗಳಿಗೆ ರಫ್ತು ಮಾಡುತ್ತಿತ್ತು. ಆದರೆ ಭಾರತ ಬಲು ಬೇಗ ಕೈಗಾರಿಕೋದ್ಯಮದಲ್ಲಿ ತನ್ನ ಈ ಪಾರಮ್ಯವನ್ನು ಕಳೆದುಕೊಂಡಿತು. ಔರಂಗಜೇಬನ ಮರಣಾ ನಂತರ ಕೇಂದ್ರೀಯ ಅಧಿಕಾರವಿಲ್ಲದಂತಾಗಿ ಒಂದು ಬಗೆಯ ಅರಾಜಕತೆ ತಲೆದೋರಿ ಯೂರೊಪಿಯನ್ನರಿಗೆ ಭಾರತದ ವ್ಯಾಪಾರ ವ್ಯವಸ್ಥೆಯನ್ನು ನಿಯಂತ್ರಿಸುವ ಅವಕಾಶ ಉಂಟಾಯಿತು. ಮುಖ್ಯವಾಗಿ ಬ್ರಿಟಿಷರು ಭಾರತವನ್ನು ತಮ್ಮ ವಸಾಹತಾಗಿ ಮಾಡಿಕೊಂಡು, ತಮ್ಮ ಕೈಗಾರಿಕೋತ್ಪನ್ನದ ಮಾರುಕಟ್ಟೆ ಹಾಗೂ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಸರಬರಾಜು ಮಾಡುವ ಸಾಧನವಾಗಿ ಪರಿವರ್ತಿಸಿಕೊಂಡರು. ಮುಂದೆ 18ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿ ಭಾರತದ ಕೈಗಾರಿಕೋದ್ಯಮಿಗಳ ಅಂತ್ಯಕ್ಕೆ ಒಂದು ರೀತಿ ಕಾರಣವಾಯಿತು. ಸ್ಪಿನ್ನಿಂಗ್ ಜೆನ್ನಿ ಮತ್ತು ಹಬೆಯಂತ್ರಗಳ ಉಪಜ್ಞೆಗಳು ಹಾಗೂ ವಿದ್ಯುತ್ತಿನ ಬಳಕೆಯಿಂದ ಬ್ರಿಟಿಷ್ ಕೈಗಾರಿಕಾ ಸರಕುಗಳ ತಯಾರಿಕೆಯ ವೆಚ್ಚ ಕಡಿಮೆಯಾಯಿತು. ಬ್ರಿಟಿಷ್ ಸರಕುಗಳು ಭಾರತದಲ್ಲೂ ಹೊರದೇಶಗಳಲ್ಲೂ ಭಾರತದ ಸರಕುಗಳ ಸ್ಥಾನವನ್ನು ಆಕ್ರಮಿಸಿದುವು. ಹೀಗಾಗಿ ಭಾರತೀಯ ಹತ್ತಿ ಬಟ್ಟೆ, ಕಬ್ಬಿಣ, ಗಾಜು, ಕಾಗದ ಮತ್ತು ಹಡಗು ತಯಾರಿಕೆ ಬ್ರಿಟಿಷ್ ಪೈಪೋಟಿಯ ಕಾರಣ ಹಿಂದುಳಿದುವು. ರೈಲು ಮತ್ತು ರಸ್ತೆ ಸಾರಿಗೆ ಬೆಳೆವಣಿಗೆ, ಸೂಯೆಜ್ ಕಾಲುವೆಯ ನಿರ್ಮಾಣದಿಂದಾಗಿ ಹಡಗು ಬಾಡಿಗೆ ಇಳಿಕೆ ಇವೆಲ್ಲವೂ ಭಾರತಕ್ಕೆ ಇಂಗ್ಲೆಂಡಿನಿಂದ ಖಾಸಗಿ ಉದ್ಯಮಿಗಳು ಬರಲು ಸಾಧ್ಯ ಮಾಡಿದುವು. ಜೊತೆಗೆ ಬ್ರಿಟಿಷ್ ಸರ್ಕಾರ ಭಾರತೀಯ ಕೈಗಾರಿಕೆಗಳಿಗೆ ಸ್ವಲ್ಪವೂ ರಕ್ಷಣೆ ನೀಡಲಿಲ್ಲ, ಯಾವ ಬಗೆಯ ಸಹಾಯವನ್ನೂ ಮಾಡಲಿಲ್ಲ. ಇದರಿಂದ ಭಾರತೀಯ ಉದ್ಯಮಿಗಳು ಕಷ್ಟಕ್ಕೀಡಾಗಿ ತಮ್ಮ ಕಸಬುಗಳನ್ನು ಕಳೆದುಕೊಂಡರು. ನವಾಬರ ಮತ್ತು ರಾಜಮಹಾರಾಜರ ಅಧಿಕಾರ ಕಳೆದುಹೋಗಿ ಅವರ ಆಶ್ರಯ ತಪ್ಪಿದುದು, ಬ್ರಿಟಿಷ್ ಹತ್ತಿ ಗಿರಿಣಿಗಳ ವಿಸ್ತರಣೆ ಹಾಗೂ ಭಾರತದಲ್ಲಿ ಕಚ್ಚಾವಸ್ತುಗಳ ಉತ್ಪಾದನೆ ಮತ್ತು ಚಟುವಟಿಕೆಗಳಿಗೆ ಸರ್ಕಾರದಿಂದ ದೊರೆತ ಉತ್ತೇಜನ ಬಲುವೇಗ ಭಾರತದ ಕೈಗಾರಿಕೀರಣಕ್ಕೆ ಕುತ್ತನ್ನು ತಂದುವು. ಹಿಂದಿನಿಂದ ನಡೆಯುತ್ತಿದ್ದ ಭಾರತೀಯ ಕಲಾತ್ಮಕ ಮತ್ತು ಕುಶಲ ವಸ್ತುಗಳ ಕೈಗಾರಿಕೆಗಳು ನಾಶ ಹೊಂದಿದುವು.
ಆದರೆ ಭಾರತದ ಕೈಗಾರಿಕಾ ಕ್ಷೇತ್ರದಲ್ಲಿ ಮುಂದೆ ಕ್ರಮೇಣ ಬದಲಾವಣೆ ಮತ್ತು ಚೇತರಿಕೆ ಕಂಡು ಬರಲಾರಂಭಿಸಿತು. ಈಸ್ಟ್ ಇಂಡಿಯಾ ಕಂಪನಿಯ ಏಕಸ್ವಾಮ್ಯ ತೊಡೆದದ್ದರಿಂದ ವಿದೇಶಿ ಬಂಡವಾಳ ಮತ್ತು ಉದ್ಯಮಿಗಳು ಭಾರತಕ್ಕೆ ಬರಲಾರಂಭಿಸಿದರು, ಜೊತೆಗೆ ಆಧುನಿಕ ಕೈಗಾರಿಕೆಗಳಿಗೆ ಅವಶ್ಯವೆನಿಸಿದ ಕೌಶಲವನ್ನು ತಂದರು. ಇಂಗ್ಲಿಷ್ ಭಾಷೆಯ ಕಲಿಕೆ ಭಾರತೀಯ ಯುವಕರು, ಆಧುನಿಕ ಕೈಗಾರಿಕೋದ್ಯಮಕ್ಕೆ ಬೇಕಾದ ಕುಶಲತೆ ಪಡೆಯುವ ಅನುಕೂಲವನ್ನು ಹೆಚ್ಚು ಮಾಡಿಕೊಟ್ಟಿತು. ನೇರವಾಗಿ ಸ್ವದೇಶಿ ಚಳವಳಿ, ಪರೋಕ್ಷವಾಗಿ ಅಮೆರಿಕದ ಅಂತರ್ಯುದ್ಧ, ಕ್ರಿಮಿಯನ್ ಯುದ್ಧ ಮೊದಲಾದವು ಭಾರತದಲ್ಲಿ ಆಧುನಿಕ ಕೈಗಾರಿಕೋದ್ಯಮ ಬೆಳೆಯಲು ಕಾರಣವಾದುವು.

ಹೀಗೆ ವಿಕಾಸಗೊಂಡ ಆಧುನಿಕ ಕೈಗಾರಿಕೋದ್ಯಮ ಪ್ರಾರಂಭದಲ್ಲಿ ಪ್ಲಾನ್‍ಟೇಷನ್ ಮತ್ತು ಕಾರ್ಖಾನೆ ಕೈಗಾರಿಕಾ ಕ್ಷೇತ್ರಗಳಲ್ಲಿ ಕಂಡುಬಂದಿತು. ನೀಲಿ, ಟೀ ಮತ್ತು ಕಾಫಿ ಪ್ಲಾನ್‍ಟೇಷನ್‍ಗಳನ್ನು ಈಸ್ಟ್ ಇಂಡಿಯಾ ಕಂಪನಿಯ ಸೇವೆಯಿಂದ ನಿವೃತ್ತರಾದ ಅಧಿಕಾರಿಗಳು ಬೆಳೆಸಿದರು. ಕಾರ್ಖಾನೆ ಕೈಗಾರಿಕೆ 1875ರಿಂದೀಚೆಗೆ ವೃದ್ಧಿಗೊಂಡವು. ಮುಖ್ಯವಾಗಿ ಹತ್ತಿ ಮತ್ತು ಸೆಣಬು ಕೈಗಾರಿಕೆಗಳೂ ಹಲವಾರು ಬಗೆಯ ಖನಿಜೋತ್ಪನ್ನದ ಹಾಗೂ ಇತರ ಸಣ್ಣ ಕೈಗಾರಿಕೆಗಳೂ ಅಸ್ತಿತ್ವಕ್ಕೆ ಬಂದುವು.

ಒಂದನೆಯ ಮಹಾಯುದ್ಧದ ತನಕ ಆಧುನಿಕ ಕೈಗಾರಿಕೆಗಳ ಬೆಳೆವಣಿಗೆ ತೀರ ಮಂದಗತಿಯಲ್ಲೆ ಸಾಗಿತ್ತು. ಯುದ್ಧ ಹಾಗೂ ಯುದ್ಧೋತ್ತರ ಅವಧಿಯಲ್ಲಿ ಕೈಗಾರಿಕಾ ಸರಕುಗಳಿಗೆ ಬಂದ ಹೆಚ್ಚಿನ ಬೇಡಿಕೆಯ ಕಾರಣ ಭಾರತೀಯ ಕೈಗಾರಿಕೆಗಳು ವೇಗವಾಗಿ ಬೆಳೆಯಲಾರಂಭಿಸಿದುವು. ಮುಖ್ಯವಾಗಿ ಯುದ್ಧ ಕಾಲದಲ್ಲಿ ಭಾರತೀಯ ಕೈಗಾರಿಕೆಗಳು ವಹಿಸುವ ಪಾತ್ರದ ಪ್ರಾಮುಖ್ಯ ಅರಿತ ಬ್ರಿಟಿಷ್ ಸರ್ಕಾರ ಅವುಗಳ ವಿವಿಧೋನ್ಮುಖ ಬೆಳೆವಣಿಗೆಗಾಗಿ ಸಮಿತಿ, ಆಯೋಗಗಳನ್ನು (ಉದಾಹರಣೆಗೆ ಭಾರತೀಯ ಕೈಗಾರಿಕಾ ಆಯೋಗ (1916-18), ಹಣಕಾಸಿನ ಆಯೋಗ, (1921-22), ವಿದೇಶಿ ಬಂಡವಾಳ ಸಮಿತಿ (1925), ಕಾರ್ಮಿಕರನ್ನು ಕುರಿತ ರಾಯಲ್ ಆಯೋಗ (1929-31) ನೇಮಿಸಿ ಅವುಗಳ ಸಲಹೆಗಳನ್ನು ಪಾಲಿಸಿದ ಕಾರಣ ಕೈಗಾರಿಕಾ ಕ್ಷೇತ್ರದಲ್ಲಿ 1922-39ರ ಅವಧಿಯಲ್ಲಿ ತಕ್ಕ ಮಟ್ಟಿನ ಪ್ರಗತಿ ಕಂಡುಬಂತು. ಉಕ್ಕು, ಹತ್ತಿ ಜವಳಿ, ಕಾಗದ, ಬೆಂಕಿಪೆಟ್ಟಿಗೆ, ಸಕ್ಕರೆ, ಸಿಮೆಂಟ್, ವಿದ್ಯುತ್ ಉಪಕರಣಗಳನ್ನು ತಯಾರಿಸುವುದರಲ್ಲಿ ಗಮನಾರ್ಹ ಪ್ರಗತಿ ಸಾಧಿತವಾಯಿತು.

ಎರಡನೆಯ ಮಹಾಯುದ್ಧ ಕೈಗಾರಿಕೆಗಳ ಬೆಳೆವಣಿಗೆಗೆ ಇನ್ನೂ ಹೆಚ್ಚಿನ ಉತ್ತೇಜನ ನೀಡಿತು. ಈ ಅವಧಿಯಲ್ಲಿ ದೊಡ್ಡ ಕೈಗಾರಿಕೆಗಳು ವೇಗವಾಗಿ ಬೆಳೆದುವಲ್ಲದೆ ಸಣ್ಣ ಕೈಗಾರಿಕೆಗಳೂ ಹೆಚ್ಚು ಸಂಖ್ಯೆಯಲ್ಲಿ ಅಸ್ತಿತ್ವಕ್ಕೆ ಬಂದು ಭಾರತೀಯ ಕೈಗಾರಿಕೋದ್ಯಮವನ್ನು ಬಲಪಡಿಸಿದುವು. ಆದರೆ ಯುದ್ಧದಿಂದ ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮವೂ ಉಂಟಾಯಿತು. ಯುದ್ಧ ಕಾಲದಲ್ಲಿ ಉತ್ಪಾದನೆಯನ್ನು ಏರಿಸಿದ್ದರಿಂದ ಯಂತ್ರೋಪಕರಣಗಳು ವಿಶೇಷವಾಗಿ ಸವೆದು ಅವುಗಳ ದುರಸ್ತಿಯ ಆವಶ್ಯಕತೆಯುಂಟಾಯಿತು. ಜೊತೆಗೆ ಕೈಗಾರಿಕಾ ಬೆಳೆವಣಿಗೆ ಯುದ್ಧಕಾಲದ ಹಣದುಬ್ಬರದಿಂದ ಉತ್ತೇಜಿತವಾಗಿತ್ತೆ ಹೊರತು, ನಿಜವಾದ ಬೆಳೆವಣಿಗೆಯನ್ನು ಉತ್ತೇಜಿಸುವಂಥ ಮಾರುಕಟ್ಟೆ ವಿಸ್ತರಣೆ, ತಾಂತ್ರಿಕವೃದ್ಧಿ, ಇಳಿಮುಖ ವೆಚ್ಚ ಮುಂತಾದ ಅಂಶಗಳಿಂದಾಗಿರಲಿಲ್ಲ. ಯುದ್ಧಕಾಲದ ಪರಿಸ್ಥಿತಿ ಇಲ್ಲವಾದಾಗ ಅನೇಕ ಕೈಗಾರಿಕೆಗಳು ತೊಡಕುಗಳಿಗೆ ಸಿಕ್ಕಿದುವು. ಬಂಡವಾಳ, ಯಂತ್ರೋಪಕರಣ, ಕಚ್ಚಾವಸ್ತು, ನುರಿತ ಕಾರ್ಮಿಕರು, ಉತ್ತಮ ಸಾರಿಗೆ ಮುಂತಾದವುಗಳ ಅಭಾವ ಸಿಮೆಂಟ್ ಮತ್ತು ಕೈಗಾರಿಕೆಗಳ ವಿವಾದಗಳೇ ಮುಂತಾದ ಕಾರಣದಿಂದ (1946-47) ಕಬ್ಬಿಣ ಮತ್ತು ಉಕ್ಕು, ಸಕ್ಕರೆ, ಹತ್ತಿ ಜವಳಿ, ಕಾಗದ ಮುಂತಾದ ಕೈಗಾರಿಕೆಗಳ ಉತ್ಪಾದನೆ ಇಳಿಯಿತು. 1947ರಲ್ಲಿ ದೇಶ ಇಬ್ಭಾಗವಾದ ಕಾರಣ ಈ ಪರಿಸ್ಥಿತಿ ಮತ್ತು ಉಲ್ಬಣಗೊಂಡಿತು. ವಿಭಜನೆಯ ಕಾರಣ ಭಾರತ ಕಲ್ಲುಪ್ಪು, ಜಿಪ್ಸಮ್ ಮುಂತಾದ ಖನಿಜ ನಿಕ್ಷೀಪಗಳ ಪ್ರದೇಶಗಳನ್ನೂ ಹೆಚ್ಚು ಸಣಬು ಮತ್ತು ಹತ್ತಿ ಬೆಳೆಯುವ ಪ್ರದೇಶಗಳನ್ನೂ ಪಾಕಿಸ್ತಾನಕ್ಕೆ ಬಿಟ್ಟು ಕೊಡಬೇಕಾಯಿತು. ಶೇಕಡಾ 81ರಷ್ಟು ಸೆಣಬು ಬೆಳೆಯುವ ಪ್ರದೇಶವಾದ ಪೂರ್ವ ಬಂಗಾಲ (ಪಾಕಿಸ್ತಾನ) ಇಂದಿನ ಬಂಗ್ಲಾದೇಶಕ್ಕೆ ಸೇರಿತಲ್ಲದೆ ಉತ್ತಮ ಗುಣಮಟ್ಟದ ಹತ್ತಿ ಬೆಳೆಯುವ ಪಶ್ಚಿಮ ಪಂಜಾಬ್ ಮತ್ತು ಸಿಂಧ್ ಪ್ರದೇಶಗಳೂ ಪಾಕಿಸ್ತಾನಕ್ಕೆ ಹೋದವು. ಹೆಚ್ಚಿನ ಪ್ರಮಾಣದ ಕೈಗಾರಿಕೆಗಳು ಭಾರತದಲ್ಲೇ ಉಳಿದವು. ಹೀಗಾಗಿ ಕಚ್ಚಾ ವಸ್ತುಗಳ ಅಭಾವವನ್ನು ಭಾರತ ಅನುಭವಿಸಬೇಕಾಗಿ ಬಂತು.

ಈ ಪರಿಸ್ಥಿತಿಯನ್ನು ಎದುರಿಸಿದ ಸ್ವತಂತ್ರ ಭಾರತ ಸರ್ಕಾರ ಕೈಗಾರಿಕೋತ್ಪನ್ನವನ್ನು ಹೆಚ್ಚಿಸುವ ದೃಷ್ಟಿಯಿಂದ ಅನೇಕ ಕ್ರಮಗಳನ್ನು ಕೈಗೊಂಡಿತು. 1947 ಡಿಸೆಂಬರ್‍ನಲ್ಲಿ ತ್ರಿಪಕ್ಷ ಕೈಗಾರಿಕಾ ಸಮ್ಮೇಳನ ಕರೆದು ಬಂಡವಾಳ ಮತ್ತು ಕಾರ್ಮಿಕರ ನಡುವೆ ಮೂರು ವರ್ಷಗಳ ಸೌಹಾರ್ದಯುತ ಸಂಬಂಧವಿಡುವ ಒಪ್ಪಂದ ಮಾಡಿಸಿತು. 1948-49ರ ಬಜೆಟ್ಟಿನಲ್ಲಿ ಕೈಗಾರಿಕೆಗಳಿಗೆ ಕೆಲವು ತೆರಿಗೆ ವಿನಾಯಿತಿಗಳನ್ನು ಕೊಟ್ಟುದಲ್ಲದೆ 1948ರಲ್ಲಿ ಕೈಗಾರಿಕೆಗಳಿಗೆ ಸಾಲ ನೀಡುವ ಕೈಗಾರಿಕಾ ಹಣಕಾಸು ಸಂಸ್ಥೆಯನ್ನು ಕೂಡ ಸ್ಥಾಪಿಸಿತು. 1948 ಏಪ್ರಿಲ್‍ನಲ್ಲಿ ಕೈಗಾರಿಕಾ ನೀತಿ ನಿರೂಪಣೆಯೊಂದನ್ನು ಹೊರಡಿಸಿ ವಿದೇಶಿ ಬಂಡವಾಳದ ಪಾತ್ರ. ಗುಡಿಸಲು (ಕಾಟೆಜ್) ಮತ್ತು ಸಣ್ಣ ಕೈಗಾರಿಕೆಗಳ ಬೆಳೆವಣಿಗೆ ಹಾಗೂ ಕೈಗಾರಿಕೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳ ಪಾತ್ರ ಇವನ್ನು ಸರ್ಕಾರ ನಿರೂಪಿಸಿತು.

ಯೋಜನಾವಧಿಯಲ್ಲಿ ಕೈಗಾರಿಕಾ ಬೆಳವಣಿಗೆ : ಭಾರತೀಯ ಕೈಗಾರಿಕೆಗಳ ಬೆಳೆವಣಿಗೆ ಆರ್ಥಿಕ ಯೋಜನೆಯಲ್ಲಿ ಹೆಚ್ಚಿನ ಉತ್ತೇಜನ ದೊರೆಯಿತು. ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಮೊದಲು ಅನುಭೋಗಿ ಸರಕುಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಪ್ರಾಮುಖ್ಯ ನೀಡಲಾಗಿದ್ದಿತು. ಆದ ಕಾರಣ ಮೂಲ ಬಂಡವಾಳ ವಸ್ತು ಹಾಗೂ ಮಧ್ಯವರ್ತಿ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆಗಳಾದ ಉಕ್ಕು ಮತ್ತು ಕಬ್ಬಿಣ, ಯಂತ್ರೋಪಕರಣಗಳು, ರಸಗೊಬ್ಬರ, ಪೆಟ್ರೋಲಿಯಮ್ ಮುಂತಾದ ಕೈಗಾರಿಕೆಗಳು ತೀರ ಹಿಂದುಳಿದಿದ್ದುವು. ಆರ್ಥಿಕತೆಯ ಬೆಳೆವಣಿಗೆಯನ್ನು ತೀವ್ರಗೊಳಿಸುವ ಹಾಗೂ ಸಮತೋಲ ಕೈಗಾರಿಕಾ ಬೆಳೆವಣಿಗೆಯನ್ನು ಪ್ರವರ್ತನಗೊಳಿಸುವ ಸೃಷ್ಟಿಯಿಂದ ಯೋಜನಾಯೋಗ ಸಮರ್ಪಕವಾದ ಒಂದು ಕೈಗಾರಿಕಾ ಬೆಳೆವಣಿಗೆಯ ಯೋಜನೆಯನ್ನು ಒಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ ರೂಪಿಸಿತು. ಕೈಗಾರಿಕೆಗೆ ಸಂಬಂಧಿಸಿದಂತೆ ಒಂದನೆಯ ಯೋಜನೆಯ ಉದ್ದೇಶಗಳಿವು :

1. ಪ್ರಸ್ತುತವಿರುವ ಬಂಡವಾಲ ಮತ್ತು ಅನುಭೋಗಿ ಸರಕು ಕೈಗಾರಿಕೆಗಳ ಉತ್ಪಾದನಾ ಸಾಮಥ್ರ್ಯದ ಪೂರ್ಣ ಬಳಕೆ.
2. ಬಂಡವಾಳ ವಸ್ತು ಕೈಗಾರಿಕೆಗಳ ಉತ್ಪಾದನಾ ಸಾಮಥ್ರ್ಯದ ವಿಸ್ತರಣೆ ಹಾಗೂ
3. ನಾಡಿನ ಕೈಗಾರಿಕಾ ಸಾಮಥ್ರ್ಯ ಹೆಚ್ಚಿಸುವುದರಲ್ಲಿ ಸಹಾಯ ಮಾಡುವ ಕೈಗಾರಿಕೆಗಳ ಸ್ಥಾಪನೆ.

ಒಂದನೆಯ ಯೋಜನೆ ಕೈಗಾರಿಕಾ ಬೆಳೆವಣಿಗೆಗಾಗಿ ರೂ 707 ಕೋಟಿ ವಿನಿಯೋಗಿಸುವ ಉದ್ದೇಶ ಹೊಂದಿತ್ತು. ಅದರಲ್ಲಿ 94 ಕೋಟಿ ಮಾತ್ರ ವಿನಿಯೋಗವಾಯಿತು. ಈ ಯೋಜನಾವಧಿಯಲ್ಲಿ ಕೈಗಾರಿಕಾ ಬೆಳೆವಣಿಗೆಗಾಗಿ ಖಾಸಗಿ ವಲಯಕ್ಕೆ ಅತ್ಯಧಿಕ ಪಾತ್ರ ಕೊಡಲಾಗಿತ್ತು. ಕೈಗಾರಿಕೋದ್ಯಮ ಉತ್ತಮ ಫಲಿತಾಂಶವನ್ನು ನೀಡುವಂತೆ ಮಾಡಲು ಸರ್ಕಾರ 1951ರಲ್ಲೇ ಅನೇಕ ಕ್ರಮಗಳನ್ನು ಕೈಗೊಂಡಿತು. ಹೀಗೆ ಉತ್ಪಾದನಾ ತಂತ್ರಗಳು ಹಾಗೂ ಅವಕ್ಕೆ ಸಂಬಂಧಿಸಿದ ಸಮಸ್ಯೆಗಳು ಇವನ್ನು ಪರಿಶೀಲಿಸಲು ಕೈಗಾರಿಕಾ ಜಂಟಿ ಸಲಹಾ ಮಂಡಳಿಯನ್ನೂ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ಹಣಕಾಸು ಒದಗಿಸುವ ದೃಷ್ಟಿಯಿಂದ ರಾಜ್ಯಗಳಲ್ಲಿ ಕೈಗಾರಿಕಾ ಹಣಕಾಸು ಸಂಸ್ಥೆಗಳನ್ನೂ ಕೈಗಾರಿಕೆಗಳ ರಕ್ಷಣೆಯ ಹಕ್ಕು ಸಾಧನೆಗಳನ್ನು ಪರಿಶೀಲಿಸುವ ಆಮದು-ರಫ್ತು ಸುಂಕಗಳ ನಿಯೋಗವನ್ನೂ ಸ್ಥಾಪಿಸಿ ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿಗೆ ಬೇಕಾದ ಅನುಕೂಲಕರ ಸ್ಥಿತಿ ಸೃಷ್ಟಿಸಿತು.

ಒಂದನೆಯ ಯೋಜನೆ ಫಲಕಾರಿ ಎನಿಸಿಕೊಂಡ ಕೈಗಾರಿಕೋತ್ಪಾದನೆ ಈ ಅವಧಿಯಲ್ಲಿ ಶೇಕಡಾ 38ರಷ್ಟು ಏರಿಕೆ ತೋರಿಸಿತು. ಇದರ ಪೈಕಿ ಬಂಡವಾಳ ಸರಕುಗಳ ಉತ್ಪಾದನೆ ಶೇಕಡಾ 70, ಕೈಗಾರಿಕಾ ಕಚ್ಚಾ ಸಾಮಗ್ರಿಗಳ ಉತ್ಪಾದನೆ ಹಾಗೂ ಕೈಗಾರಿಕಾ ಅನುಭೋಗಿ ಸರಕುಗಳ ಉತ್ಪಾದನೆ ತಲಾ ಶೇಕಡಾ 34ಕ್ಕೆ ಏರಿದುವು.

ಆವಡಿ ಕಾಂಗ್ರೆಸ್ ಸಮ್ಮೇಳನದ ಸಮಾಜವಾದಿ ನಿರ್ಣಯದ ಪರಿಣಾಮವಾಗಿ ಸರ್ಕಾರ ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚಿನ ಪಾತ್ರ ವಹಿಸಬೇಕಾಗಿ ಬಂತು. ಹೀಗಾಗಿ 1956ರ ಕೈಗಾರಿಕಾ ನೀತಿ ನಿರೂಪಣೆ ಕೈಗಾರಿಕಾ ಬೆಳೆವಣಿಗೆಯನ್ನು ಪ್ರವರ್ತನಗೊಳಿಸುವ ಕಾರ್ಯದಲ್ಲಿ ಸರ್ಕಾರಿ ವಲಯ ಹೆಚ್ಚು ಪ್ರಮಾಣದಲ್ಲಿ ಪಾಲುಗೊಳ್ಳುವಂತೆ ಆದೇಶ ನೀಡಿದುದಲ್ಲದೆ ಸರ್ಕಾರಿ ಮತ್ತು ಖಾಸಗಿ ಬಂಡವಾಳ ಪಾಲುಗೊಳ್ಳುವ ಕೈಗಾರಿಕಾಕ್ಷೇತ್ರಗಳ ಎಲ್ಲೆಗಳನ್ನು ಗುರುತು ಮಾಡಿಕೊಟ್ಟಿತು ಕೂಡ. ಈ ಆದೇಶಗಳ ಮೇರೆಗೆ ಎರಡನೆಯ ಯೋಜನೆ ಕೈಗಾರಿಕಾಭಿವೃದ್ಧಿಗೆ ವಿನಿಯೋಜಿಸುವ ರೂ 1094 ಕೋಟಿಗಳ ಪೈಕಿ ರೂ 559 ಕೋಟಿಯನ್ನು ಸರ್ಕಾರಿ ಕೈಗಾರಿಕಾ ವಲಯಕ್ಕೆ ನಿಗದಿಮಾಡಿತು. ಅಲ್ಲದೆ ಒಟ್ಟು ವೆಚ್ಚದ ಬಹುಪಾಲನ್ನು (ರೂ 759 ಕೋಟಿ) ಬಂಡವಾಳವಸ್ತು ಕೈಗಾರಿಕೆಗಳಿಗಾಗಿ ವಿನಿಯೋಗಿಸಬೇಕೆಂದೂ ನಿರ್ಧರಿಸಲಾಯಿತು. ಹೀಗಾಗಿ ಎರಡನೆಯ ಯೋಜನೆಯಲ್ಲಿ ಬಂಡವಾಳ ವಸ್ತು ಕೈಗಾರಿಕೆಗಳಿಗೆ ಪ್ರಾಮುಖ್ಯ ನೀಡಿದುದಲ್ಲದೆ ಸರ್ಕಾರಿ ವಲಯಕ್ಕೆ ಹೆಚ್ಚಿನ ಒತ್ತು ಕೊಟ್ಟಂತಾಯಿತು.

ಎರಡನೆಯ ಯೋಜನೆಯ ಕೈಗಾರಿಕಾ ಕ್ಷೇತ್ರದಲ್ಲಿಯ ವಾಸ್ತವಿಕ ವಿನಿಯೋಜನೆ ಮೂಲತಃ ಉದ್ದೇಶಿಸಿದ್ದಕ್ಕಿಂತ ಶೇಕಡಾ 30ರಷ್ಟು ಅಧಿಕವಾಯಿತು. ಇದರ ಕಾರಣ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕಾ ವಿಸ್ತರಣ ಕಾರ್ಯಕ್ರಮ. ಎರಡನೆಯ ಯೋಜನೆಯ ಅತಿ ಗಮನಾರ್ಹ ಅಂಶ ಭಿಲಾಯ್, ರೂರ್ಕೇಲ ಮತ್ತು ದುರ್ಗಾಪುರಗಳಲ್ಲಿ ಅನುಕ್ರಮವಾಗಿ ಸೋವಿಯತ್ ದೇಶ ಜರ್ಮನಿ ಮತ್ತು ಬ್ರಿಟನ್ನಿನ ನೆರವಿನಿಂದ ಮೂರು ಉಕ್ಕು ಮತ್ತು ಕಬ್ಬಿಣದ ಅತಿ ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸಿದ್ದು. ಅಲ್ಲದೆ ಎರಡನೆಯ ಯೋಜನಾವಧಿಯಲ್ಲಿ ಎಲ್ಲ ಕೈಗಾರಿಕೆಗಳ ಉತ್ಪಾದನೆ ಗಮನಾರ್ಹ ಏರಿಕೆ ತೋರಿಸಿದುವು ಕೂಡ. ಹೀಗಾಗಿ ಕೈಗಾರಿಕಾ ಉತ್ಪಾದನ ಸೂಚ್ಯಂಕ (1950-51: 100) 1955-56ರಲ್ಲಿ 134 ಇದ್ದು 1960-61ರಲ್ಲಿ 194ಕ್ಕೆ ಏರಿತು. ಈ ಅವಧಿಯಲ್ಲಿ ಕೆಲವು ಎಂಜಿನಿಯರಿಂಗ್ ಹಾಗೂ ಯಂತ್ರೋಪಕರಣ ಕಾರ್ಖಾನೆಗಳು ಉತ್ಪಾದನೆಯ ಹಂತ ಮುಟ್ಟಿದುವು. ಆದರೆ ವಿದೇಶಿ ವಿನಿಮಯದ ಹಾಗೂ ತಂತ್ರವಿದರ ಕೊರತೆಯಿಂದಾಗಿ ಕಾರ್ಖಾನೆಗಳ ಪ್ರತಿಷ್ಠಾಪನೆಗೆ ತಡೆಯಾದ್ದರಿಂದ ಕಬ್ಬಿಣ ಮತ್ತು ಉಕ್ಕು, ರಸಗೊಬ್ಬರ, ರಾಸಾಯನಿಕ ವಸ್ತುಗಳು, ಅಲ್ಯೂನಿಮಿಯಮ್ ಮೊದಲಾದ ಕೈಗಾರಿಕೆಗಳ ಉತ್ಪಾದನೆ ಅಷ್ಟು ಉತ್ತೇಜನಕಾರಿಯಾಗಿರಲಿಲ್ಲ.

ಮೂರನೆಯ ಯೋಜನೆಯಲ್ಲಿ ಸರ್ಕಾರಿ ವಲಯ ಹಾಗೂ ಬಂಡವಾಳವಸ್ತು ಕೈಗಾರಿಕೆಗಳ ಮೇಲಿನ ಪ್ರಾಧಾನ್ಯವನ್ನು ಮುಂದುವರಿಸಲಾಯಿತು. ಈ ಅವಧಿಯಲ್ಲಿ ಕೈಗಾರಿಕಾಭಿವೃದ್ಧಿಗೆ ರೂ 2720 ಕೋಟಿ ಹೂಡುವುದೆಂದೂ ಇದರ ಪೈಕಿ ರೂ 1520 ಕೋಟಿಯನ್ನು ಸರ್ಕಾರಿ ವಲಯದಲ್ಲಿ ಹೂಡುವುದೆಂದೂ ಯೋಜಿಸಲಾಯಿತು. ಉಳಿದ ರೂ 1200 ಕೋಟಿ ಖಾಸಗಿ ವಲಯದಲ್ಲಿ ಹೂಡಲ್ಪಟ್ಟು ಮುಖ್ಯವಾಗಿ ಗ್ರಾಹಕ ವಸ್ತು ತಯಾರಿಕಾ ಕೈಗಾರಿಕೆಗಳ ವೃದ್ಧಿ ಹಾಗೂ ಸ್ಥಾಪನೆಗಾಗಿ ಮೀಸಲಿಡುವುದೆಂದಿತ್ತು. ರೂ 425 ಕೋಟಿಯನ್ನು ಸಣ್ಣ ಮತ್ತು ಗುಡಿಸಲು (ಕಾಟೇಜ್) ಕೈಗಾರಿಕೆಗಳಿಗಾಗಿ ನಿಗದಿಮಾಡಲಾಗಿತ್ತು.

ಯೋಜನೆಯ ಅಂತ್ಯದ ಹೊತ್ತಿಗೆ ಕೈಗಾರಿಕಾಭಿವೃದ್ಧಿಗಾಗಿ ಸುಮಾರು ರೂ 3000 ಕೋಟಿ-ಇದರ ಪೈಕಿ ರೂ 1700 ಕೋಟಿ ಸರ್ಕಾರಿ ವಲಯದಲ್ಲೂ ರೂ 1300 ಕೋಟಿ ಖಾಸಗಿ ವಲಯದಲ್ಲೂ ವಿನಿಯೋಗವಾಯಿತೆಂದು ಅಂದಾಜು ಮಾಡಲಾಗಿದೆ. ನಿಗದಿ ಮೀರಿ ಆದ ಹೂಟೆಯಿಂದ ಕೈಗಾರಿಕೋತ್ಪಾದನೆಯಲ್ಲಿ ಹೆಚ್ಚಳವಾಗಲಿಲ್ಲ. ಈ ಅವಧಿಯಲ್ಲಿ ಕೈಗಾರಿಕೋತ್ಪಾದನೆ ಸಾಲಿಯಾನ ಶೇಕಡಾ 11ರ ದರದಲ್ಲಿ ವೃದ್ಧಿಯಾಗುವುದೆಂದು ಗುರಿಯಿಟ್ಟುಕೊಳ್ಳಲಾಗಿತ್ತು. ಆದರೆ ವಾಸ್ತವಿಕವಾಗಿ ಅದು ಶೇಕಡಾ ಸರಾಸರಿ 6.8ರ ದರದಲ್ಲಿ ವೃದ್ಧಿಯಾಯಿತು. ಇದಕ್ಕೆ ಕಾರಣವಾದ ಅಂಶಗಳಿವು : ವಿದೇಶಿ ವಿನಿಮಯದ ಅಭಾವ, ಚೀನ ಹಾಗೂ ಪಾಕಿಸ್ತಾನಗಳೊಡನೆ ಭಾರತದ ಯುದ್ಧ, ಅನಾದೃಷ್ಟಿಯಿಂದಾಗಿ ಕೈಗಾರಿಕಾ ಕಚ್ಚಾ ಸರಕುಗಳ ಅಭಾವ ಹಾಗೂ ಬಂಡವಾಳ ವಾಸ್ತು ಕೈಗಾರಿಕೆಗಳಿಗೆ ಪ್ರಾಮುಖ್ಯ ನೀಡಿದ್ದು. ಈ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಬಂಡವಾಳ ಹೂಡಿಕೆ ಮತ್ತು ಉತ್ಪಾದನೆ ಆರಂಭ ಇವುಗಳ ನಡುವಣ ಕಾಲ ಅತಿದೀರ್ಘ.
1966ರಲ್ಲೇ ಪ್ರಾರಂಭವಾಗಬೇಕಾಗಿದ್ದ ನಾಲ್ಕನೆಯ ಯೋಜನೆ 1969ರ ತನಕ ಮುಂದೂಡಲ್ಪಟ್ಟಿತು. ಈ ಅವಧಿಯಲ್ಲಿ ಮೂರು ಸಾಲಿಯಾನಾ ಯೋಜನೆಗಳು ರೂಪಿತವಾದುವು. ಒಂದು ರೀತಿಯಲ್ಲಿ ಅವು ಹಂಗಾಮಿಯಾದ್ದರಿಂದ ಈ ವಾರ್ಷಿಕ ಯೋಜನೆಗಳಲ್ಲಿಯ ಕೈಗಾರಿಕಾ ಬೆಳೆವಣಿಗೆಗೆ ಸಂಬಂಧಿಸಿದ ಯೋಜನೆ ಅಷ್ಟು ಗಮನಾರ್ಹವಾದ್ದೇನಲ್ಲ. ನಾಲ್ಕನೆಯ ಯೋಜನೆ ಈ ತೆರವನ್ನು ತುಂಬುವ ಪ್ರಯತ್ನವನ್ನು ಕೈಗೊಂಡಿತು. ಕೈಗಾರಿಕೆಗೆ ಸಂಬಂಧಿಸಿದಂತೆ ಈ ಯೋಜನೆಯ ಉದ್ದೇಶಗಳಿವು : 1 ಕೈಗಾರಿಕಾಭಿವೃದ್ಧಿಯಲ್ಲಿಯ ಅಸಮತೋಲವನ್ನು ಸರಿಪಡಿಸುವುದು. 2 ಕೈಗಾರಿಕೋತ್ಪಾದನ ಶಕ್ತಿಯ ಗರಿಷ್ಠ ಬಳಕೆಯನ್ನು ಸಾಧಿಸುವುದು ಹಾಗೂ 3 ಆಮದು ಪ್ರತಿನಿಧಾನ ಮತ್ತು ರಫ್ತು ಪ್ರವರ್ತನೆಗಳ ಉದ್ದೇಶಗಳನ್ನು ಸಾಧಿಸುವುದರ ಜೊತೆಗೆ ಅವಶ್ಯ ವಸ್ತುಗಳ ಬಗ್ಗೆಯೂ ಆಂತರಿಕ ಬೇಡಿಕೆಯನ್ನು ಪೂರೈಸುವ ದೃಷ್ಟಿಯಿಂದ ಉತ್ಪಾದನ ಶಕ್ತಿಯನ್ನು ಹೆಚ್ಚಿಸುವುದು.

ಈ ಉದ್ದೇಶಗಳನ್ನು ಸಾಧಿಸುವುದಕ್ಕಾಗಿ ಯೋಜನೆಯಲ್ಲಿ ರೂ 5300 ಕೋಟಿ ಹೂಡುವ ಯೋಜನೆ ಇಟ್ಟುಕೊಂಡಿತು. ಇದರ ಪೈಕಿ ಶೇಕಡಾ ಸುಮಾರು 60ರಷ್ಟು ಹಣ ಸರ್ಕಾರಿ ವಲಯಕ್ಕೆ ಸಂಬಂಧಿಸಿದ್ದು. ಯೋಜನಾವಧಿಯಲ್ಲಿ ತಿರುಳುವಲಯದ ಪರಿಕಲ್ಪನೆಯನ್ನು ವೃದ್ಧಿಪಡಿಸಿ ಈ ಕ್ಷೇತ್ರದಲ್ಲಿ ಕೆಲವಾರು ಕೈಗಾರಿಕೆಗಳ ಸಮುದಾಯಗಳನ್ನು ಸೇರಿಸಲಾಯಿತು; ಕಬ್ಬಿಣ ಮತ್ತು ಉಕ್ಕು, ಕಬ್ಬಿಣೇತರ ಲೋಹಗಳು, ಕೈಗಾರಿಕಾ ಯಂತ್ರೋಪಕರಣಗಳು, ಕೃತಕ ಗೊಬ್ಬರ, ಕೃಷಿಯಂತ್ರೋಪಕರಣಗಳು, ವೃತ್ತಿಪತ್ರಿಕಾಕಾಗದ, ಕಬ್ಬಿಣದ ಅದುರು, ಕಿಟ್ಟ ಕಲ್ಲಿದ್ದಲು, ಪೆಟ್ರೋಲಿಯಮ್ ವಸ್ತುಗಳು, ಪೆಟ್ರೋಲಿಯಮ್ ರಾಸಾಯನಿಕ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಸುದ್ದಿ ಸಂಪರ್ಕಕ್ಕೆ ಬೇಕಾಗುವ ವಸ್ತುಗಳು ಇವನ್ನು ತಯಾರಿಸುವ ಕೈಗಾರಿಕೆಗಳು, ಇವುಗಳಿಗೆ ಬೇಕಾಗುವ ಹಣಕಾಸು ಕಚ್ಚಾವಸ್ತು ಮೊದಲಾದವುಗಳ ಸರಬರಾಜಿಗೆ ಆದ್ಯತೆ ನೀಡಬೇಕೆಂದಾಯಿತು.

ನಾಲ್ಕನೆಯ ಯೋಜನೆಯ ಅವಧಿಯಲ್ಲಿ ಕೈಗಾರಿಕಾ ಬೆಳವಣಿಗೆ ತೀರ ಕುಂಠಿತಗೊಂಡಿತು. ಕೈಗಾರಿಕಾ ಬೆಳವಣಿಗೆಯ ದರದ ಗುರಿ ಶೇಕಡಾ 8ರಿಂದ ಶೇಕಡಾ 10 ಇದ್ದಿತಾದರೂ ವಾಸ್ತವಿಕ ದರ ಕೇವಲ ಶೇಕಡಾ 3.9 ಹಾಗೂ ವಾಸ್ತವಿಕ ಬೆಳೆವಣಿಗೆ ದರ ಮೂಲ ಕೈಗಾರಿಕೆಗಳ ಬಗ್ಗೆ ಶೇಕಡಾ 4.9, ಬಂಡವಾಳ ವಸ್ತು ಕೈಗಾರಿಕೆಗಳ ಬಗ್ಗೆ ಶೇಕಡಾ 3.6-ಇವೆಲ್ಲವೂ ಗುರಿಯಾಗಿಟ್ಟುಕೊಂಡದ್ದಕ್ಕಿಂತ ತೀರ ಕಡಿಮೆ. ಕಚ್ಚಾ ವಸ್ತುಗಳ, ಕಲ್ಲಿದ್ದಲಿನ ಮತ್ತು ವಿದ್ಯುತ್ತಿನ ಅಭಾವ, ವಿದೇಶಿ ವಿನಿಮಯ ಪಡೆಯುವುದರಲ್ಲಿ ತೊಂದರೆ, ಹೂಟೆಯಲ್ಲಿ ಖೋತ ಹಾಗೂ ಕೈಗಾರಿಕೆಗಳ ಪ್ರತಿಷ್ಠಾಪನೆಯಲ್ಲಿ ತಡೆ-ಇವು ಇದಕ್ಕೆ ಕಾರಣ.

ಸ್ವಾವಲಂಬನೆ ಹಾಗೂ ಸಾಮಾಜಿಕ ನ್ಯಾಯದೊಡನೆ ಆರ್ಥಿಕ ಬೆಳವಣಿಗೆ-ಈ ಎರಡು ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಐದನೆಯ ಯೋಜನೆ ಕೈಗಾರಿಕಾ ವೈವಿಧ್ಯ ಮತ್ತು ರಫ್ತು ಹೆಚ್ಚಿಸುವ ಕೈಗಾರಿಕೆಗಳ ಅಭಿವೃದ್ಧಿ ಹೆಚ್ಚು ಬೇಡಿಕೆಯಿರುವ ಅನುಭೋಗ ಸರಕುಗಳನ್ನು ಉತ್ಪಾದಿಸುವ ಕೈಗಾರಿಕೆಗಳ ವಿಸ್ತರಣೆ, ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ಅನಾವಶ್ಯಕ ವಸ್ತುಗಳ ಉತ್ಪಾದನೆಯನ್ನು ಪ್ರೋತ್ಸಾಹಿಸದಿರುವುದೇ ಈ ಯೋಜನೆಯ ಮುಖ್ಯ ಧ್ಯೇಯಗಳಾಗಿದ್ದುವು.

ಕೈಗಾರಿಕಾಭಿವೃದ್ಧಿಗಾಗಿ (1972-3ರ ಬೆಲೆಯಲ್ಲಿ) ರೂ 8328 ಕೋಟಿಯನ್ನು ಸರ್ಕಾರಿ ವಲಯದಲ್ಲೂ ರೂ 5200 ಕೋಟಿಯನ್ನು ಖಾಸಗಿ ವಲಯದಲ್ಲೂ ವಿನಿಯೋಜಿಸುವ ಯೋಜನೆ ರಚಿಸಲಾಗಿದ್ದುದಲ್ಲದೆ ಸಣ್ಣ ಮತ್ತು ಗುಡಿಸಲು ಕೈಗಾರಿಕೆಗಳ ಅಭಿವೃದ್ಧಿಗೆ ರೂ 1660 ಕೋಟಿ ನಿಬಂಧಿಸಲಾಗಿದ್ದಿತು. ಕೈಗಾರಿಕೋತ್ಪಾದನೆಯನ್ನು ಸಾಲಿಯಾನ ಶೇಕಡಾ 7ರಂತೆ ಹೆಚ್ಚಿಸುವ ಯೋಜನೆಯಿತ್ತಾದರೂ ಕಚ್ಚಾ ಸಾಮಗ್ರಿ, ವಿದ್ಯುತ್ತು ಮತ್ತು ಕಲ್ಲಿದ್ದಲು ಅಭಾವದ ಕಾರಣ ಕೈಗಾರಿಕೆಗಳು ತಮ್ಮ ಉತ್ಪಾದನ ಸಾಮಥ್ರ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲಾಗಲಿಲ್ಲ. ಆದಕಾರಣ 1974-75 ಮತ್ತು 1975-76ರಲ್ಲಿ ಕೈಗಾರಿಕೋತ್ಪಾದನೆ ಅನುಕ್ರಮವಾಗಿ ಶೇಕಡಾ 2.5 ಮತ್ತು ಶೇಕಡಾ 5.7ರಷ್ಟು ಮಟ್ಟಿಗೆ ಮಾತ್ರ ವೃದ್ಧಿಗೊಂಡಿತು.

1977ರಲ್ಲಿ ಜನತಾಪಕ್ಷ ಕೇಂದ್ರದಲ್ಲಿ ತನ್ನ ಸರ್ಕಾರ ಸ್ಥಾಪಿಸಿದ ಅನಂತರ ಐದನೆಯ ಯೋಜನೆಯನ್ನು ಒಂದು ವರ್ಷ ಮೊದಲೇ ಮುಕ್ತಾಯಗೊಳಿಸಿ 1978ರಿಂದ ನೂತನ ಯೋಜನೆಯನ್ನು ರೂಪಿಸಿ ಜಾರಿಗೆ ತಂದಿತು. ನೂತನ ಯೋಜನೆಯಲ್ಲಿ (1978-83) ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳ ಪರಿಹಾರಕ್ಕೂ ಕನಿಷ್ಠ ಆವಶ್ಯಕತೆಗಳ ಪೂರೈಕೆ ಕಾರ್ಯಕ್ರಮಗಳಿಗೂ ಅಗ್ರತೆ ಕೊಡಲಾಯಿತು. ಆದಕಾರಣ ಕೃಷಿ ಹಾಗೂ ಅದರ ಸಂಬಂಧಿ ಕ್ಷೇತ್ರಗಳು, ನೀರಾವರಿ, ಸಣ್ಣ ಮತ್ತು ಗುಡಿಸಲು ಕೈಗಾರಿಕೆಗಳು ಇವುಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹೂಟೆಯ ವ್ಯೂಹವನ್ನು ರೂಪಿಸಲಾಯಿತು. ಅಧಿಕ ಬಂಡವಾಳವನ್ನು ಉಪಯೋಗಿಸುವ ಹಾಗೂ ಕಡಿಮೆ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ವ್ಯವಸ್ಥಿತ ಕೈಗಾರಿಕಾಕ್ಷೇತ್ರಕ್ಕೆ ಅಷ್ಟಾಗಿ ಅಗ್ರತೆ ದೊರೆಯಲಿಲ್ಲ. ಆದರೆ ಬೆಳವಣಿಗೆ ಅಗ್ರಕ್ಷೇತ್ರಗಳಿಗೆ ಬೆಂಬಲ ನೀಡಲು ಬೇಕಾಗುವ ಮಟ್ಟಿಗೆ ಮಾತ್ರ ಉತ್ತೇಜನ ದೊರಕಿತ್ತು. ಈ ಯೋಜನಾವಧಿಯಲ್ಲಿ ಕೈಗಾರಿಕಾಭಿವೃದ್ಧಿಗಾಗಿ ಪ್ರಯೋಗಿಸಲಾದ ವ್ಯೂಹ ರಚನೆ ಈ ರೀತಿ ಇತ್ತು :

1. ಪ್ರಸ್ತುತ ಕೈಗಾರಿಕಾ ಸಾಮಥ್ರ್ಯದ ಪೂರ್ಣ ಉಪಯೋಗ
2. ಕಡಿಮೆ ಬಂಡವಾಳದ ತಂತ್ರ ವಿದ್ಯೆ ಬಳಸುವ ಕೈಗಾರಿಕೆಗಳಿಗೆ ಉತ್ತೇಜನೆ
3. ಭರ್ತಿ ಮಾಡಲಾಗುವ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವುದು
4. ಆರ್ಥಿಕ ಬಲ ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುವುದನ್ನು ನಿಯಂತ್ರಣಗಳ ಮೂಲಕ ತಪ್ಪಿಸುವುದು ಹಾಗೂ
5. ಭಾರತದ ಕೈಗಾರಿಕೆಗಳ ಸರಕುಗಳು ಹೊರದೇಶದ ಕೈಗಾರಿಕಾ ಸರಕುಗಳೊಡನೆ ಕನಿಷ್ಠ ಪ್ರಮಾಣದಲ್ಲಿದ್ದರೂ ಪೈಪೋಟಿಗೆ ನಿಲ್ಲುವಂತೆ ಮಾಡಿ ಈ ಕೈಗಾರಿಕೆಗಳನ್ನು ಬಲಪಡಿಸುವುದು.

	ಈ ಯೋಜನೆಯ ಪ್ರಕಾರ ಕೈಗಾರಿಕೋತ್ಪಾದನೆ ಸಾಲಿಯಾನ ಶೇಕಡಾ 7ರಷ್ಟು ಬೆಳೆಸುವುದು ಗುರಿಯಾಗಿತ್ತು. ಇದಕ್ಕಾಗಿ ಸರ್ಕಾರಿ ವಲಯ ರೂ 13,340 ಕೋಟಿಯನ್ನೂ ಖಾಸಗಿ ವಲಯದಲ್ಲಿ ರೂ 12,464 ಕೋಟಿಯನ್ನೂ ವಿನಿಯೋಜಿಸುವ ಯೋಜನೆ ಮಾಡಲಾಯಿತು. ಅಲ್ಲದೆ ಸಣ್ಣ ಮತ್ತು ಗುಡಿಸಲು ಕೈಗಾರಿಕೆಗಳಿಗಾಗಿ ಸರ್ಕಾರಿ ವಲಯದಲ್ಲೇ ರೂ 1410 ಕೋಟಿಯನ್ನು ನಿಗದಿ ಮಾಡಲಾಗಿತ್ತು. ಈ ಕ್ಷೇತ್ರಕ್ಕೆ ಸುಮಾರು ರೂ 2000 ಕೋಟಿಯಷ್ಟು ಹೂಟೆ ಹಣಕಾಸು ಸಂಸ್ಥೆ ಮತ್ತು ಖಾಸಗಿ ವ್ಯಕ್ತಿಗಳಿಂದ ಬರುವ ನಿರೀಕ್ಷೆಯಿತ್ತು.

	ಕೆಲವು ಕೈಗಾರಿಕೆಗಳು : ಕೈಗಾರಿಕೆಯ ಬೆಳವಣಿಗೆಯ ಬಗ್ಗೆ ಕೊಟ್ಟ ಮೇಲಿನ ಸಾಮಾನ್ಯ ವಿವರಣೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಕೆಲವು ಕೈಗಾರಿಕೆಗಳ ಬೆಳೆವಣಿಗೆ ಹಾಗೂ ಅವುಗಳ ಇತ್ತೀಚಿನ ಸಮಸ್ಯೆಗಳನ್ನು ಮುಂದೆ ವಿವೇಚಿಸಲಾಗಿದೆ. ಇಲ್ಲಿ ದೊಡ್ಡ ಕೈಗಾರಿಕೆಗಳ ಪೈಕಿ ಕೆಲವು ಪ್ರಮುಖ ಕೈಗಾರಿಕೆಗಳನ್ನೂ ಭಾರತದ ಬೆನ್ನೆಲುಬು ಎನಿಸಿದ ಸಣ್ಣ ಮತ್ತು ಗುಡಿಸಲು ಕೈಗಾರಿಕೆಗಳನ್ನೂ ಕುರಿತ ಸಂಕ್ಷಿಪ್ತ ವಿವರಣೆ ಕೊಟ್ಟಿದೆ.

ಪ್ರಮುಖ ಕೈಗಾರಿಕೆಗಳು : ದೊಡ್ಡ ಕೈಗಾರಿಕೆಗಳು 19ನೆಯ ಶತಮಾನದ ಮಧ್ಯಾಂತರದಲ್ಲಿ ಅಸ್ತಿತ್ವಕ್ಕೆ ಬಂದುವು. ಸುಮಾರು ಆ ಹೊತ್ತಿಗೆ ಪರಿಮಿತ ಹೊಣೆ ತತ್ತ್ವ ಜಾರಿಗೆ ಬಂದಿದ್ದು, ಬಂಡವಾಳಗಾರನ ಹಣದ ಜವಾಬ್ದಾರಿ ಪರಿಮಿತವೆನಿಸಿಕೊಂಡಿದ್ದರಿಂದ ದೊಡ್ಡ ಕೈಗಾರಿಕೆಗಳಿಗೆ ಬೇಕಾಗುವ ಬೃಹತ್ ಬಂಡವಾಳವನ್ನು ಅನೇಕ ಸಣ್ಣ ಕುಳಗಳಿಂದಲೂ ಶೇಖರಿಸುವ ಅನುಕೂಲವುಂಟಾಯಿತು. ಕೈಗಾರಿಕೆಗಳಿಗೆ ಹಣಕಾಸು ನೀಡುವ ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳು ಬೆಳೆಯಲಾರಂಭಿಸಿದ್ದುವು. ಇದರಿಂದ ಭಾರತದಲ್ಲೂ ದೊಡ್ಡ ಕೈಗಾರಿಕೆಗಳು ಬೆಳೆಯುವಂತಾಯಿತು.

ಆದರೆ ಈ ಕೈಗಾರಿಕೆಗಳು ಕಾನ್ಪುರ, ಮುಂಬಯಿ, ಕಲ್ಕತ್ತ, ಅಹಮದಾಬಾದ್, ಮದ್ರಾಸ್-ಇಂಥ ಕೇಂದ್ರಗಳಿಗೆ ಸೀಮಿತಗೊಂಡಿದ್ದುವು. ಅವನ್ನು ಮುಖ್ಯವಾಗಿ ಬ್ರಿಟಿಷ್ ಬಂಡವಾಳಗಾರರು ನಿಯಂತ್ರಿಸಿಕೊಂಡಿದ್ದರು. ಕಾಲ ಕ್ರಮೇಣ ಸ್ಥಳೀಯ ಬಂಡವಾಳಗಾರರ ಸಂಖ್ಯೆ ಹೆಚ್ಚಿದಂತೆ ಕೈಗಾರಿಕೋದ್ಯಮದ ಮೇಲಿನ ಬ್ರಿಟಿಷರ ಹಿಡಿತ ಸಡಿಲವಾದುದಲ್ಲದೆ ಕೈಗಾರಿಕೆಗಳು ಕೆಲವೇ ನಗರಗಳಲ್ಲಿ ಕೇಂದ್ರೀಕೃತವಾಗಿರದೆ ಇತರ ಕಡೆಗಳಲ್ಲೂ ಹರಡಲು ಉಪಕ್ರಮಿಸಿದುವು.

	ಭಾರತದ ದೊಡ್ಡ ಕೈಗಾರಿಕೆಗಳ ಪೈಕಿ ಪ್ರಮುಖವಾದವು ಹತ್ತಿ ಜವಳಿ, ಸೆಣಬು, ಸಕ್ಕರೆ, ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳು.
ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ : ಕಬ್ಬಿಣ ಮತ್ತು ಉಕ್ಕು ಮೂಲ ಲೋಹವಾಗಿದ್ದು ಅನೇಕ ಯಂತ್ರೋಪಕರಣ ಹಾಗೂ ಯುದ್ಧೋಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುವ ಕಚ್ಚಾ ಸಾಮಗ್ರಿಯಾದ್ದರಿಂದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಯಾವುದೇ ಆರ್ಥಿಕತೆಯ ಬೆನ್ನೆಲುಬು ಎನಿಸುತ್ತವೆ. ಈ ಕೈಗಾರಿಕೆ ಭಾರತದಲ್ಲಿ ಹಲವು ಶತಮಾನಗಳಿಂದ ಅಸ್ತಿತ್ವದಲ್ಲಿದ್ದರೂ ಆಧುನಿಕ ಉಕ್ಕು ಮತ್ತು ಕಬ್ಬಿಣ ಕೈಗಾರಿಕೆ 19ನೆಯ ಶತಮಾನದ ಅಂತ್ಯದಲ್ಲಿ ಸ್ಥಾಪಿತವಾಯಿತು. ಮೊತ್ತಮೊಲಿಗೆ ಸ್ಥಾಪಿತವಾದ್ದು ಬಾರಾಕಾರ್ ಕಬ್ಬಿಣದ ಕಾರ್ಖಾನೆ (1874). ಆದರೆ ನಿಜ ಅರ್ಥದಲ್ಲಿ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ ಈಗಿನ ಜೆಮ್‍ಷೆಡ್‍ಪುರದಲ್ಲಿಯ ತಾತಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿತವಾದಾಗಿನಿಂದ ಪ್ರಾರಂಭವಾಯಿತು. ಈ ಕಾರ್ಖಾನೆ ಕಬ್ಬಿಣದ ಉತ್ಪಾದನೆಯನ್ನು 1911ರಲ್ಲೂ ಉಕ್ಕಿನ ಉತ್ಪಾದನೆಯನ್ನು 1913ರಲ್ಲೂ ಪ್ರಾರಂಭಿಸಿತು. 1918ರಲ್ಲಿ ಬಂಗಾಳದ ಬರ್ನ್‍ಪುರದಲ್ಲಿ ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯೂ 1923ರಲ್ಲಿ ಭದ್ರಾವತಿಯಲ್ಲಿ ಈಗಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯೂ ಸ್ಥಾಪಿತವಾಗಿ ಈ ಕೈಗಾರಿಕೆಯ ಬೆಳೆವಣಿಗೆಗೆ ಅಡಿಪಾಯ ಹಾಕಿಕೊಟ್ಟವು.

ಪಂಚವಾರ್ಷಿಕ ಯೋಜನೆಗಳು ಪ್ರಾರಂಭವಾಗಿ ಆರ್ಥಿಕ ಬೆಳೆವಣಿಗೆಗೆ ಬುನಾದಿ ಹಾಕುವಾಗ ಕಬ್ಬಿಣ ಮತ್ತು ಉಕ್ಕಿನ ಆವಶ್ಯಕತೆ ಹೆಚ್ಚಾಗಿ ಕಂಡುಬಂದ ಕಾರಣ ಹೊಸ ಉತ್ಪಾದನಾ ಸಾಮಥ್ರ್ಯವನ್ನು ಸೃಷ್ಟಿಸಬೇಕಾಗಿ ಬಂತು. ಉಕ್ಕಿನ ಆವಶ್ಯಕತೆಯನ್ನು ಪ್ರಸ್ತುತದಲ್ಲಿದ್ದ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರದಲ್ಲಿಯ ಕಾರ್ಖಾನೆಗಳ ಉತ್ಪಾದನಾ ಶಕ್ತಿಯನ್ನು ವಿಸ್ತರಿಸುವುದರ ಮೂಲಕ ಪೂರೈಸಲಾಯಿತು. 1956ರ ಕೈಗಾರಿಕಾ ನೀತಿಯ ನಿರೂಪಣೆಯ ಪ್ರಕಾರ ಈ ಕೈಗಾರಿಕೆ 'ಎ' ಅನುಸೂಚಿಯಲ್ಲಿ ಸೇರ್ಪಟ್ಟ ಕಾರಣ ಖಾಸಗಿ ಕಾರ್ಖಾನೆಗಳು ತಮ್ಮ ಉತ್ಪಾದನಾ ಸಾಮಥ್ರ್ಯವನ್ನು ವಿಸ್ತರಿಸುವುದರಲ್ಲಿ ಅಭ್ಯಂತರವಿಲ್ಲದಿದ್ದರೂ ಹೊಸ ಕಾರ್ಖಾನೆಗಳು ಸರ್ಕಾರಿ ವಲಯದಲ್ಲೇ ಸ್ಥಾಪಿತವಾಗಬೇಕೆಂಬ ನಿರ್ಬಂಧಕ್ಕೆ ಒಳಪಟ್ಟವು. ಆದಕಾರಣ ಹೊಸ ಕಾರ್ಖಾನೆಗಳು ಸರ್ಕಾರಿ ವಲಯದಲ್ಲೇ ಸ್ಥಾಪಿತವಾದುವು. ಹೀಗೆ 1950ರ ದಶಕದ ಮಧ್ಯದಲ್ಲಿ ಅತಿ ದೊಡ್ಡ ಮೂರು ಕಾರ್ಖಾನೆಗಳನ್ನು ವಿದೇಶೀಯರ ನೆರವಿನಿಂದ ಎಂದರೆ ರೂರ್ಕೆಲಾದಲ್ಲಿ ಜರ್ಮನರ, ಭಿಲಾಯ್‍ನಲ್ಲಿ ಸೋವಿಯತ್‍ದೇಶದ ಮತ್ತು ದುರ್ಗಾಪುರದಲ್ಲಿ ಬ್ರಿಟಿಷರ ನೆರವಿನಿಂದ ಸ್ಥಾಪಿಸಲಾಯಿತು. 1965ರಲ್ಲಿ ಸೋವಿಯತ್ ದೇಶದ ನೆರವಿನಿಂದ ಮತ್ತೊಂದು ಕಾರ್ಖಾನೆಯನ್ನು ಸರ್ಕಾರ ಬೊಕಾರೊವಿನಲ್ಲಿ ಸ್ಥಾಪಿಸಿತು. ಇವಲ್ಲದೆ, ಐದನೆಯ ಯೋಜನೆಯಲ್ಲಿ ಮೂರು ಉಕ್ಕಿನ ಕಾರ್ಖಾನೆಗಳನ್ನು ಹೊಸಪೇಟೆ, ಸೇಲಮ್ ಮತ್ತು ವಿಶಾಖಪಟ್ಟಣಗಳಲ್ಲಿ ಸ್ಥಾಪಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು ವಿಶಾಖಪಟ್ಟಣ ಹಾಗೂ ಸೇಲಮ್‍ಗಳಲ್ಲಾಗಲೇ ಕಾರ್ಖಾನೆಗಳನ್ನು ಸ್ಥಾಪಿಸುವ ಏರ್ಪಾಟುಗಳು ನಡೆಯುತ್ತಿದ್ದರೂ ಹೊಸಪೇಟೆಯ ಕಾರ್ಖಾನೆಯ ಬಗ್ಗೆ ಸಂದೇಹ ಮುಂದುವರಿದಿದೆ (1985). ಹೊಸಪೇಟೆಗೆ ಬದಲಾಗಿ ಮಂಗಳೂರಿನಲ್ಲಿ ಕಾರ್ಖಾನೆ ಸ್ಥಾಪಿಸುವ ಬಗೆಗೂ ಕೇಂದ್ರ ಕೈಗಾರಿಕಾ ಮಂತ್ರಿಮಂಡಲ ಆಲೋಚನೆ ಹರಿಸಿತ್ತು.

ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಬೆಳವಣಿಗೆ ಸರ್ಕಾರಿವಲಯದಲ್ಲಿ ಪ್ರಮುಖವಾಗಿದೆ. ಇಂದು ಸುಮಾರು ರೂ.3000 ಕೋಟಿ ಬಂಡವಾಳದ ಪೈಕಿ ಮೂರನೆಯ ಎರಡರಷ್ಟು ಬಂಡವಾಳವನ್ನು ಸರ್ಕಾರಿವಲಯದ ಕಾರ್ಖಾನೆಗಳಲ್ಲೇ ಹೂಡಲಾಗಿದೆ. ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿಯ ಉಕ್ಕಿನ ಉತ್ಪಾದನೆಯ ಪ್ರಮಾಣಗಳೂ ಗಮನಾರ್ಹವಾಗಿ ಬದಲಾವಣೆಯಾಗಿವೆ. ಹೀಗೆ ಉಕ್ಕಿನ ಉತ್ಪಾದನೆ 1963-64ರಲ್ಲಿ ಶೇಕಡಾ 63ರಷ್ಟು ಖಾಸಗಿ ವಲಯದಲ್ಲಿ ಉಳಿದ ಶೇಕಡಾ 37ರಷ್ಟು ಇತ್ತು. ಸರ್ಕಾರಿ ವಲಯದ ಉತ್ಪಾದನೆಯ ಪ್ರಮಾಣ ಶೇಕಡಾ 50ಕ್ಕೆ ಏರಿದೆ.
ಆಂತರಿಕವಾಗಿ ಬೇಡಿಕೆಯಲ್ಲಿ ಏರಿಕೆ ಆಗಿದ್ದರೂ ಉಕ್ಕಿನ ಉತ್ಪಾದನೆ ಅಷ್ಟು ಉತ್ತೇಜನಕಾರಿಯಾಗಿರಲಿಲ್ಲ. 1950-51ರಲ್ಲಿ ಉಕ್ಕಿನ ಉತ್ಪಾದನೆ ಕೇವಲ 10 ಲಕ್ಷ ಟನ್ನಿನಷ್ಟಿತ್ತು. ಎರಡನೆಯ ಯೋಜನೆಯ ಅಂತ್ಯದ ಹೊತ್ತಿಗೆ 43 ಲಕ್ಷಟನ್ನಿನಷ್ಟು ಉಕ್ಕನ್ನು ಉತ್ಪಾದಿಸುವ ಗುರಿ ಇಟ್ಟುಕೊಂಡಿದ್ದರೂ ವಾಸ್ತವಿಕ ಉತ್ಪಾದನೆ ಕೇವಲ 24 ಲಕ್ಷ ಟನ್ ಮಾತ್ರ. ನಾಲ್ಕನೆಯ ಯೋಜನೆಯ ಅಂತ್ಯದ ಹೊತ್ತಿಗೆ ಸಾಧಿಸಿದ ಉಕ್ಕಿನ ಉತ್ಪಾದನೆಯ ಮಟ್ಟ 57.6 ಲಕ್ಷ ಟನ್.

ಕಾರ್ಖಾನೆಗಳು ತಮ್ಮ ಉತ್ಪಾದನಾ ಶಕ್ತಿಯನ್ನು ಉಪಯೋಗಿಸಿಕೊಳ್ಳದಿರುವುದೇ ಉಕ್ಕಿನ ಉತ್ಪಾದನೆ ಗುರಿಮಟ್ಟದಿರಲು ಅತಿ ಮುಖ್ಯ ಕಾರಣ. ಉಕ್ಕಿನ ಉತ್ಪಾದನೆ 1970-71 ಮತ್ತು 1974-75ರಲ್ಲಿ ಅನುಕ್ರಮವಾಗಿ ಶೇಕಡಾ 67 ಮತ್ತು ಶೇಕಡಾ 69 ಮಾತ್ರ. ಖಾಸಗಿ ವಲಯದ ಸುಮಾರು 200 ಸಣ್ಣ ಕಾರ್ಖಾನೆಗಳ ಪೈಕಿ ಶೇಕಡಾ 75 ಮುಚ್ಚಲ್ಪಟ್ಟುವಲ್ಲದೆ ಉಳಿದವು ತಮ್ಮ ಉತ್ಪಾದನಾ ಸಾಮಥ್ರ್ಯದ 25ರಷ್ಟು ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದುವು. ಹೀಗೆ ಉತ್ಪಾದನಾ ಸಾಮಥ್ರ್ಯಕ್ಕಿಂತ ಕಡಿಮೆ ಉತ್ಪಾದನೆಯಾಗಲು ಕಾರಣವಾದ ಅಂಶಗಳೆಂದರೆ ವಿದ್ಯುತ್ ಮತ್ತು ಕಲ್ಲಿದ್ದಲಿನ ಅಭಾವ, ಯಂತ್ರೋಪಕರಣಗಳ ಕೆಡುವಿಕೆ ಹಾಗೂ ಕಾರ್ಮಿಕ ವಿವಾದಗಳು.

ಈ ಸಮಸ್ಯೆಯ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳಲ್ಲಿ ಮುಖ್ಯವಾದದ್ದು 1974ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರ ಎಂಬ ಸಂಸ್ಥೆಯ ಸ್ಥಾಪನೆ. ಇದರ ಮುಖ್ಯ ಧ್ಯೇಯಗಳೆಂದರೆ ಉಕ್ಕಿನ ಉತ್ಪಾದನೆಯ ಬಗ್ಗೆ ಯೋಜನೆಗಳು ರೂಪಿಸಿದ ಗುರಿಯನ್ನು ಮುಟ್ಟುವಂತೆ ಮಾಡುವುದು ಹಾಗೂ ಸರ್ಕಾರಿ ಮತ್ತು ಖಾಸಗಿ ವಲಯಗಳ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳ ಬೆಳೆವಣಿಗೆನ್ನು ಸಂಘಟಿಸಿ ಉಕ್ಕು ಕಾರ್ಖಾನೆಗಳ ಬೆಳೆವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ ಅವುಗಳಿಗೆ ಬೇಕಾಗುವ ಕಿಟ್ಟ ಕಲ್ಲಿದ್ದಲು ಹಾಗೂ ಕಬ್ಬಿಣ ಅದುರನ್ನು ಉತ್ಪಾದಿಸುವುದರಲ್ಲಿ ತೊಡಗುವುದು. ಈ ದೃಷ್ಟಿಯಿಂದ ಈ ಸಂಸ್ಥೆಯ ಅಧೀನಕ್ಕೆ ಸರ್ಕಾರಿವಲಯದ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಗಳನ್ನು ತಂದು ಭಾರತೀಯ ಕಿಟ್ಟ ಕಲ್ಲಿದ್ದಲು, ನಿಯಮಿತ ಮತ್ತು ರಾಷ್ಟ್ರೀಯ ಖನಿಜ ಬೆಳೆವಣಿಗೆ ಕಾರ್ಪೊರೇಷನ್‍ಗಳನ್ನು ಅದರ ಅಧೀನಕ್ಕೊಳಪಡಿಸಲಾಗಿದೆ.

ಭಾರತೀಯ ಉಕ್ಕುಪ್ರಾಧಿಕಾರದ ಕಾರ್ಯಚಟುವಟಿಕೆಗಳಿಂದ ಉಕ್ಕಿನ ಉತ್ಪಾದನೆ 1973-74ರಲ್ಲಿಯ 40 ಲಕ್ಷ ಟನ್ನುಗಳಿಂದ 1976-77ರಲ್ಲಿ ಸುಮಾರು 70 ಲಕ್ಷ ಟನ್‍ಗಳಿಗೆ ಏರಿತು. ಜೊತೆಗೆ ಅದುವರೆಗೆ ಸರ್ಕಾರಿ ಕಾರ್ಖಾನೆಗಳು ನಷ್ಟವನ್ನು ತೋರಿಸುತ್ತಿದ್ದವು. ಪ್ರಾಧಿಕಾರದ ಅಧೀನಕ್ಕೆ ಬಂದ ಅನಂತರ ಅಧಿಕಗೊಂಡಿತು. ಪ್ರಸ್ತುತದಲ್ಲಿ ಉಕ್ಕಿನ ಉತ್ಪಾದನೆ ಬೇಡಿಕೆಯನ್ನು ಮೀರಿರುವುದು ಗಮನಾರ್ಹ. 1977-78ರಲ್ಲಿ ಉಕ್ಕಿನ ಬೇಡಿಕೆ 69.4 ಲಕ್ಷ ಟನ್ನುಗಳಿದ್ದರೆ ಉಕ್ಕಿನ ಉತ್ಪಾದನೆ 77.3 ಲಕ್ಷ ಟನ್ನುಗಳು.

ಹತ್ತಿ ಜವಳಿ ಕೈಗಾರಿಕೆ : ಹತ್ತಿ ಜವಳಿ ಕೈಗಾರಿಕೆ ಭಾರತದ ಕೈಗಾರಿಕೆಗಳಲ್ಲೆಲ್ಲ ಅತಿ ದೊಡ್ಡದು. ಈ ಕೈಗಾರಿಕೆಯಲ್ಲಿ 691 ಗಿರಣಿಗಳೂ 2.1 ಲಕ್ಷ ಮಗ್ಗಗಳೂ 189 ಕದಿರುಗಳೂ ಇವೆ. ಸುಮಾರು ರೂ 2500 ಕೋಟಿ ಬೆಲೆಯ ಸರಕುಗಳ ಉತ್ಪಾದನೆಯಾಗುತ್ತದೆ. ಈ ಕೈಗಾರಿಕೆ 9.5 ಲಕ್ಷ ಮಂದಿಗೆ ನೇರವಾಗಿ ಉದ್ಯೋಗಾವಕಾಶಗಳನ್ನು ನೀಡಿರುವುದಲ್ಲದೆ ಪರೋಕ್ಷವಾಗಿಯೂ ಹತ್ತಿಬೆಳೆಯುವ ಹಾಗೂ ಅದನ್ನು ಸಂಸ್ಕರಿಸುವ ಚಟುವಟಿಕೆಗಳಲ್ಲಿ ನಿರತರಾಗಿರುವ ಅನೇಕ ಲಕ್ಷ ಮಂದಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ರಫ್ತು ಮಾರುಕಟ್ಟೆಯಲ್ಲೂ ಇದರ ಪಾತ್ರ ಗಮನಾರ್ಹವಾದ್ದು. ಪ್ರಪಂಚದ ಹತ್ತಿ ಜವಳಿ ರಫ್ತಿನ ಶೇಕಡಾ ಸುಮಾರು 19ರಷ್ಟು ಭಾಗ ಭಾರತದ ಹತ್ತಿಜವಳಿ ಕೈಗಾರಿಕೆಯಿಂದ ಪೂರ್ಣಗೊಳ್ಳುತ್ತಿದೆ.

ಮೊತ್ತ ಮೊದಲನೆಯ ಹತ್ತಿ ಜವಳಿ ಕಾರ್ಖಾನೆ ಕಲ್ಕತ್ತದಲ್ಲಿ 1818ರಲ್ಲಿ ಸ್ಥಾಪಿತವಾದರೂ ಇವರ ನಿಜವಾದ ಬೆಳೆವಣಿಗೆ ಮುಂಬಯಿಯಲ್ಲಿ 1856ರಲ್ಲಿ ಸ್ಥಾಪಿಸಲಾದ ಬೊಂಬಾಯಿ ನೂಲುವ ಮತ್ತು ನೇಯುವ ಗಿರಣಿಯ ಸ್ಥಾಪನೆಯಿಂದ ಪ್ರಾರಂಭವಾಯಿತೆನ್ನಬಹುದು. ಪ್ರಾರಂಭದ ಹಂತಗಳಲ್ಲಿ ಈ ಕೈಗಾರಿಕೆ ಬ್ರಿಟಿಷರ ಉತ್ತೇಜನಕಾರಿಯಲ್ಲದ ಕರನೀತಿಯ ಕಾರಣ ಮಾರುಕಟ್ಟೆ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ ಸ್ವದೇಶಿ ಚಳವಳಿ ಹಾಗೂ ಒಂದನೆಯ ಮಹಾಯುದ್ಧ ಇದರ ಬೆಳೆವಣಿಗೆಗೆ ಸಾಕಷ್ಟು ಉತ್ತೇಜನೆ ನೀಡಿದುವು. ಆದರೂ ಜಪಾನಿ ವಸ್ತುಗಳ ಪೈಪೋಟಿಯೂ 1929ರ ಪ್ರಪಂಚದ ಆರ್ಥಿಕ ಕುಸಿತವೂ ಇದರ ಬೆಳೆವಣಿಗೆಯನ್ನು ಕುಂಠಿತಗೊಳಿಸಿದುವು. 1927ರಲ್ಲಿ ಹತ್ತಿ ಜವಳಿ ಕೈಗಾರಿಕೆಗೆ ನೀಡಿದ ಸಂರಕ್ಷಣೆ ಈ ಕೈಗಾರಿಕೆ ಸಂಪೂರ್ಣವಾಗಿ ಕೊಚ್ಚಿ ಹೋಗದಂತೆ ತಡೆಯಿತು. ಎರಡನೆಯ ಮಹಾಯುದ್ಧದ ದೆಸೆಯಿಂದ ಈ ಕೈಗಾರಿಕೆ ಮತ್ತೆ ಚೇತರಿಸಿಕೊಂಡು ಗಮನಾರ್ಹ ಬೆಳೆವಣಿಗೆ ಸಾಧಿಸಿತು. ರಾಷ್ಟ್ರೀಯ ಹತ್ತಿಗಿರಣಿ ನಿಗಮದ ಅಧೀನದಲ್ಲಿಯ ಅಸ್ವಸ್ಥ ಗಿರಣಿಗಳನ್ನು ಬಿಟ್ಟರೆ ಈ ಕೈಗಾರಿಕೆ ಸಂಪೂರ್ಣವಾಗಿ ಖಾಸಗಿ ಕ್ಷೇತ್ರದಲ್ಲಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಸ್ವಾಮ್ಯಕ್ಕೆ ಸಂಬಂಧಿಸಿದ್ದಲ್ಲ; ವ್ಯವಸ್ಥಿತ ಹಾಗೂ ವಿಕೇಂದ್ರಿತ ಕ್ಷೇತ್ರಗಳಿಗೆ ಸಂಬಂಧಿಸಿದುದು. ಹೀಗೆ ಈ ಕೈಗಾರಿಕೆಯಲ್ಲಿ ವ್ಯವಸ್ಥಿತ ಗಿರಣಿ ಕ್ಷೇತ್ರ ಒಂದು ಅಂಗವಾದರೆ ಕೈಮಗ್ಗ ಮತ್ತು ಸಣ್ಣ ಕಾರ್ಖಾನೆಗಳನ್ನೊಳಗೊಂಡ ವಿಕೇಂದ್ರಿತ ಕ್ಷೇತ್ರ ಇನ್ನೊಂದು ಅಂಗ. ಈಚೆಗೆ ವಿಕೇಂದ್ರಿತ ಅಂಗದ ಪಾತ್ರ ಒಟ್ಟು ಉತ್ಪಾದನೆಯಲ್ಲಿ ಹೆಚ್ಚುತ್ತಿದೆ. ಹೀಗೆ ಒಟ್ಟು ಕೈಗಾರಿಕಾ ಉತ್ಪಾದನೆಯಲ್ಲಿ ಗಿರಣಿ ಕ್ಷೇತ್ರದ ಪಾಲು 1950-51ರಲ್ಲಿ ಶೇಕಡಾ 78.6 ಇದ್ದುದು 1975-76ರಲ್ಲಿ ಶೇಕಡಾ 50.4ಕ್ಕೆ ಇಳಿಯಿತು. ಆದರೆ ವಿಕೇಂದ್ರಿತ ಕ್ಷೇತ್ರದ ಪಾಲು ಇದೇ ಅವಧಿಯಲ್ಲಿ ಶೇಕಡಾ 21.4ರಿಂದ ಶೇಕಡಾ 49.6ಕ್ಕೆ ಏರಿತು.

ಒಟ್ಟು ಉತ್ಪಾದನೆ 474 ಕೋಟಿ ಮೀಟರ್‍ಗಳಿಂದ (1950-51) 808 ಕೋಟಿ ಮೀಟರ್‍ಗಳಿಗೆ (1975-76) ಏರಿತಾದರೂ ರಫ್ತು ಹಾಗೂ ಆಂತರಿಕದಲ್ಲಿ ಅನುಭೋಗಿಗಳ ಆವಶ್ಯಕತೆಗಿಂತ ಕಡಿಮೆ ಎಂಬ ಭಾವನೆ ಬೆಳದುಬಂದಿದೆ. ಅಲ್ಲದೆ ಇತ್ತೀಚೆಗೆ ಉತ್ತಮ ಹಾಗೂ ಕೃತಕ ನೂಲಿನ ಬಟ್ಟೆಗಳ ತಯಾರಿಕೆಗೆ ಗಮನ ಹರಿಸಿದ್ದಾರೆ. ಆದಕಾರಣ ಬಡಜನರು ಉಡುವ ಅಗ್ಗದ ಹಾಗೂ ಮಧ್ಯಮವರ್ಗದ ಬಟ್ಟೆಗಳ ಲಭ್ಯತೆ ಕಡಿಮೆಯಾಗಿದೆ. ಈ ಪರಿಸ್ಥಿತಿಯನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಗಿರಣಿ ಮಾಲೀಕರು ಕನಿಷ್ಠ ಪಕ್ಷ ಇಂತಿಷ್ಟು ಪ್ರಮಾಣದ ಅಗ್ಗದ ಮತ್ತು ಮಧ್ಯಮದರ್ಜೆಯ ನಿಯಂತ್ರಣಕ್ಕೊಳಗಾದ ಬಟ್ಟೆಯನ್ನು ಉತ್ಪಾದಿಸಬೇಕೆಂಬ ನಿಬಂಧನೆ ಮಾಡಿದೆ. 1974ರ ಮಾರ್ಚ್‍ನಲ್ಲಿ ಈ ಪ್ರಮಾಣವನ್ನು 40 ಕೋಟಿ ಮೀಟರ್‍ಗಳಿಂದ 80 ಕೋಟಿ ಮೀಟರ್‍ಗಳಿಗೆ ಏರಿಸಲಾಯಿತು. ಆದರೆ 103 ಅಸ್ವಸ್ಥಗಿರಣಿಗಳನ್ನು ನಿರ್ವಹಿಸುತ್ತಿರುವ ರಾಷ್ಟ್ರೀಯ ಹತ್ತಿಗಿರಣಿ ಸಂಸ್ಥೆ ಈ ನಿಬಂಧನೆಯಿಂದ ರಿಯಾಯಿತಿ ಕೇಳಿ ಪಡೆಯಿತು. ಅಲ್ಲದೆ ಇತರ ಖಾಸಗಿ ಗಿರಣಿಗಳು ತೀರ ಕೆಳ ಗುಣಮಟ್ಟದ ಬಟ್ಟೆಯನ್ನು ತಯಾರಿಸಿಕೊಡುವುದರ ಮೂಲಕ ತಮ್ಮ ಈ ಕರ್ತವ್ಯದ ಪಾಲನೆ ಮಾಡಲು ಪ್ರಾರಂಭಿಸಿವೆ. ಹೀಗಾಗಿ ಬಡವರಿಗಾಗಿ ಉತ್ಪಾದಿಸುವ ನಿಯಂತ್ರಣಕ್ಕೊಳಗಾದ ಬಟ್ಟೆಯ ಪರಿಮಾಣ ಈಗ ಕಡಿಮೆಕೊಂಡಿರುವುದರ ಜೊತೆಗೆ ಅದರ ಗುಣಮಟ್ಟವೂ ಇಳಿದಿದೆ.

ಭಾರತದ ಹತ್ತಿಜವಳಿ ಕೈಗಾರಿಕೆಯ ಮುಖ್ಯ ಸಮಸ್ಯೆ ರಫ್ತಿಗೆ ಸಂಬಂಧಿಸಿದ್ದು. ಭಾರತದಿಂದ ಪ್ರತಿವರ್ಷವೂ ಕನಿಷ್ಠ ಪಕ್ಷ 100 ಕೋಟಿ ಮೀಟರ್‍ಗಳಷ್ಟು ಬಟ್ಟೆಯನ್ನು ರಫ್ತುಮಾಡಬೇಕೆಂಬ ಧ್ಯೇಯ ಇಟ್ಟುಕೊಳ್ಳಲಾಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಕೈಗಾರಿಕೆ ಚೀನ, ಪಾಕಿಸ್ತಾನ, ಇಟಲಿ, ಪಶ್ಚಿಮಜರ್ಮನಿ ಮೊದಲಾದ ದೇಶಗಳ ವಸ್ತುಗಳಿಂದ ತೀವ್ರ ಪೈಪೋಟಿ ಎದುರಿಸಬೇಕಾಗಿ ಬಂದು ಭಾರತದ ರಫ್ತು ಇಳಿಯುವ ಭಯ ಉಂಟಾಗಿದೆ. ಇದಕ್ಕೆ ಮುಖ್ಯ ಕಾರಣ ಭಾರತದ ಸರಕುಗಳ ಬೆಲೆ ರಚನೆ ಮೇಲ್ಮಟ್ಟದಲ್ಲಿರುವುದು. ಭಾರತದಲ್ಲಿ ಕೂಲಿ ಕೆಳಮಟ್ಟದಲ್ಲಿದ್ದು ಕೈಗಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿ ಹತ್ತಿಯನ್ನು ಇಲ್ಲಿಯೇ ಬೆಳೆಯುವುದಾದರೂ ಬಟ್ಟ್ಟೆಯ ಬೆಲೆ ಮೇಲ್ಮಟ್ಟದಲ್ಲಿರುವುದು ಅಸಂಗತ. ಆದರೆ ಇದಕ್ಕೆ ಕಾರಣವೂ ಉಂಟು. ಕೂಲಿದರ ಕಡಿಮೆಯಿದ್ದರೂ ಇತರ ಉತ್ಪಾದನ ವೆಚ್ಚಗಳು-ಮುಖ್ಯವಾಗಿ ಹತ್ತಿಯ ಬೆಲೆ ಹಾಗೂ ಹತ್ತಿಯನ್ನು ಸಂಸ್ಕರಿಸುವ ವೆಚ್ಚ ತೀರ ಹೆಚ್ಚು. ಕಚ್ಚಾ ಹತ್ತಿಯ ಹೆಚ್ಚಿನ ಬೆಲೆಗೆ ಕಾರಣ ಅದರ ವಿರಳತೆ ಹಾಗೂ ಭಾರತದ ಉತ್ಪತ್ತಿ ಸಾಮಥ್ರ್ಯ (ಹೆಕ್ಟೇರ್ ಒಂದಕ್ಕೆ 138 ಕೆಜಿ). ಸೋವಿಯತ್ ದೇಶ (840 ಕೆಜಿ) ಮತ್ತು ಅಮೆರಿಕ (500 ಕೆಜಿ) ಗಳಲ್ಲಿಯ ಉತ್ಪತ್ತಿ ಸಾಮಥ್ರ್ಯಕ್ಕಿಂತ ಕಡಿಮೆ. ಹತ್ತಿ ಪೊರೈಕೆಯ ಸ್ಥಿತಿಯನ್ನು ಉತ್ತಮ ತಳಿಯ ಹತ್ತಿಯನ್ನು ಬೆಳೆಸುವ ಪ್ರಯತ್ನದಿಂದಲೂ ಸುಧಾರಿಸಲು ಸಾಧ್ಯವಾಗಲಿಲ್ಲ. ಜೊತೆಗೆ ರಫ್ತು ಮಾಡುವ ಉತ್ತಮ ದರ್ಜೆಗೆ ಬೇಕಾಗುವ ಉದ್ದಕೊಂಡಿಯ ಉತ್ತಮ ದರ್ಜೆಯ ಹತ್ತಿ ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿಲ್ಲವಾದ್ದರಿಂದ ಇದನ್ನು ಹೆಚ್ಚು ಬೆಲೆ ತೆತ್ತು ಆಮದು ಮಾಡಿಕೊಳ್ಳಬೇಕಾಗಿದೆ. ಅಲ್ಲದೆ ಈ ಕೈಗಾರಿಕೆಯಲ್ಲಿ ಬಹಳ ಹಳೆಯ ಯಂತ್ರೋಪಕರಣಗಳನ್ನು ಬಳಸುತ್ತಿರುವುದರಿಂದ ಕೂಡ ಉತ್ಪಾದನ ವೆಚ್ಚ ಅಧಿಕವಾಗಿದೆ. ನವೀನ ಯಂತ್ರೋಪಕರಣಗಳನ್ನು ಉಪಯೋಗಿಸಲು ಬೇಕಾಗಿರುವ ಹಣಕಾಸು ಒದಗಿಸುವ ಶಕ್ತಿ ಉದ್ಯಮಗಳಿಗೆ ಇಲ್ಲದಿರುವುದು ಹಾಗೂ ತಾಂತ್ರಿಕ ಕ್ರಮಗಳ ಮೂಲಕ ಉತ್ಪಾದನೆ ಸಾಮಥ್ರ್ಯವನ್ನು ಹೆಚ್ಚಿಸಬಹುದಾದರೂ ನಿರುದ್ಯೋಗ ಸಮಸ್ಯೆಯುಂಟಾಗುತ್ತದೆಂಬ ಆಧಾರದ ಮೇಲೆ ಕಾರ್ಮಿಕ ಸಂಘಗಳು ಅಂಥ ಕ್ರಮಗಳನ್ನು ವಿರೋಧಿಸುತ್ತಿರುವುದು ಯಂತ್ರೋಪಕರಣಗಳ ನವೀಕರಣವಾಗದಿರುವುದಕ್ಕೆ ಮುಖ್ಯ ಕಾರಣಗಳು.

1982-83ರ ಹೊತ್ತಿಗೆ ಆಂತರಿಕ ಅನುಭೋಗ ಮತ್ತು ರಫ್ತುಗಳಿಗಾಗಿ ಹತ್ತಿ ಮತ್ತು ಕೃತಕ ನೂಲಿನ ಬಟ್ಟೆಯ ಆವಶ್ಯಕತೆ 1220 ಕೋಟಿ ಮೀಟರ್‍ಗಳೆಂದು ಅಂದಾಜು ಮಾಡಿದೆ. ನೂತನ ಕೈಗಾರಿಕಾ ನೀತಿಯ ಧ್ಯೇಯಕ್ಕೆ ಅನುಸಾರವಾಗಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕೈಮಗ್ಗ ಕ್ಷೇತ್ರ ಹೆಚ್ಚುವರಿ ಬಟ್ಟೆಯನ್ನು ಉತ್ಪಾದಿಸಬೇಕೆಂಬುದು ಸರ್ಕಾರದ ಅಪೇಕ್ಷೆ. ಈ ಧ್ಯೇಯ ಸಾಧಿಸಲು ಅನುಸರಿಸುವ ಕ್ರಮಗಳಿವು : 1 ವ್ಯವಸ್ಥಿತ ಕ್ಷೇತ್ರಕ್ಕೆ. ನೇಯುವ ಶಕ್ತಿಯ ವಿಸ್ತರಣೆ ಅನುಮತಿ ಕೊಡದಿರುವುದು; 2 ಕೈ ಮಗ್ಗಗಳಿಗಾಗಿಯೇ ಕಾದಿರಿಸಿದ ವಸ್ತುಗಳ ಉತ್ಪಾದನೆಯನ್ನು ವ್ಯವಸ್ಥಿತ ಕ್ಷೇತ್ರಗಳಲ್ಲಿ ಉತ್ಪಾದಿಸದಂತೆ ನೋಡಿಕೊಳ್ಳುವುದು; ಮತ್ತು 3 ಕೈ ಮಗ್ಗಗಳ ಪೈಪೋಟಿ ಸಾಮಥ್ರ್ಯವನ್ನು ಹೆಚ್ಚಿಸುವ ಹಣಕಾಸಿಗೆ ಸಂಬಂಧಿಸಿದ ಕ್ರಮಗಳನ್ನು ಅನುಸರಿಸುವುದು.
ಸೆಣಬು ಕೈಗಾರಿಕೆ : ಸೆಣಬು ಕೈಗಾರಿಕೆ ಹತ್ತಿಜವಳಿ ಕೈಗಾರಿಕೆಯಷ್ಟೇ ಮುಖ್ಯವಾದ್ದು. ಈ ಕೈಗಾರಿಕೆಯಲ್ಲಿ 112 ಕಾರ್ಖಾನೆಗಳಿವೆ. ಸಾಲಿಯಾನ ಸುಮಾರು 13 ಲಕ್ಷ ಟನ್ನಿನಷ್ಟು ಸೆಣಬನ್ನು ಉತ್ಪಾದಿಸುವ ಶಕ್ತಿಯಿದೆ. ಪ್ರಧಾನವಾಗಿ ಇದು ರಫ್ತು ಕೈಗಾರಿಕೆಯಾಗಿದ್ದು ತಯಾರಾದ ಬಹುಪಾಲು ಸೆಣಬು ವಸ್ತುಗಳನ್ನು ರಫ್ತುಮಾಡುತ್ತದೆ. 1951ರಲ್ಲಿ ಶೇಕಡಾ 85ರಷ್ಟು ಸೆಣಬು ಉತ್ಪನ್ನ ರಫ್ತಾಗುತ್ತಿತ್ತು. ಆದರೆ ಈಗ ಆಂತರಿಕ ಅನುಭೋಗ ಹೆಚ್ಚಿದ ಕಾರಣ ಈ ಪ್ರಮಾಣ ಶೇಕಡಾ 50ಕ್ಕೆ ಇಳಿದಿದೆ. ಆದರೂ ರಫ್ತಿನಿಂದ ಭಾರತಕ್ಕೆ ಪ್ರತಿ ವರ್ಷವೂ ಸುಮಾರು ರೂ 250 ಕೋಟಿಯಷ್ಟು ವಿದೇಶಿ ವಿನಿಮಯ ಸಿಗುತ್ತದೆ.

ಮೊತ್ತಮೊದಲ ಆಧುನಿಕ ಸೆಣಬು ಗಿರಣಿ ಬಂಗಾಳದಲ್ಲಿ 1859ರಲ್ಲಿ ಸ್ಥಾಪಿತವಾಯಿತು. ಅಂದಿನಿಂದ ಸೆಣಬು ಕೈಗಾರಿಕೆಯ ಬೆಳೆವಣಿಗೆ ನಿರಂತರವಾಗಿ ನಡೆದಿದೆ. ದೇಶ ಇಬ್ಭಾಗವಾದಾಗ ಮಾತ್ರ ಇದಕ್ಕೆ ದೊಡ್ಡ ಪೆಟ್ಟು ಬಿತ್ತು. ಏಕೆಂದರೆ ವಿಭಜನೆಯ ಕಾರಣ ಸೆಣಬು ಬೆಳೆಯುವ ಶೇಕಡಾ 72ರಷ್ಟು ಪ್ರದೇಶ ಪಾಕಿಸ್ತಾನಕ್ಕೂ (ಈಗಿನ ಬಾಂಗ್ಲಾದೇಶ) ಬಹುಪಾಲು ಸೆಣಬು ಕಾರ್ಖಾನೆಗಳಿರುವ ಪ್ರದೇಶ ಭಾರತಕ್ಕೂ ಬಂದು ಭಾರತದ ಕಾರ್ಖಾನೆಗಳಿಗೆ ಬೇಕಾದ ಸೆಣಬು ಪೂರೈಕೆ ಇಲ್ಲದಂತಾಯಿತು.

ಕಚ್ಚಾ ಸೆಣಬಿನ ನೀಡಿಕೆಯ ಬಗೆಗಿನ ತೊಂದರೆ ನೀಗಿಸುವ ದೃಷ್ಟಿಯಿಂದ ಭಾರತ ಪಾಕಿಸ್ತಾನದೊಡನೆ ಒಪ್ಪಂದ ಮಾಡಿಕೊಂಡು ಸೆಣಬನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ರಾಜಕೀಯ ಅನಿಶ್ಚಿತತೆಯ ಕಾರಣ ಆಮದಿನ ಮೇಲಿನ ಅವಲಂಬನೆ ಅಪಾಯಕಾರಿಯೆಂಬುದು ತಿಳಿದ ಮೇಲೆ ಈಗ ಸ್ವಾವಲಂಬನೆಯನ್ನು ಸಾಧಿಸುವ ದೃಷ್ಟಿಯಿಂದ ಸೆಣಬು ಬೆಳೆಯುವ ಕ್ಷೇತ್ರವನ್ನು ವಿಸ್ತರಿಸುತ್ತ ಹೋಗಲಾಗಿದೆ. ಪಶ್ಚಿಮ ಬಂಗಾಲ ಕೈಗಾರಿಕೆಯ ಶೇಕಡಾ 60 ರಷ್ಟು ಸೆಣಬಿನ ಆವಶ್ಯಕತೆಯನ್ನು ಪೂರೈಸುತ್ತದೆ. ಉಳಿದದ್ದನ್ನು ಬೇರೆ ಪ್ರದೇಶಗಳಲ್ಲಿ ಎಂದರೆ ಉತ್ತರ ಪ್ರದೇಶ, ಒರಿಸ್ಸ, ಅಸ್ಸಾಮ್, ಆಂಧ್ರ ಪ್ರದೇಶ ಮತ್ತು ಬಿಹಾರಗಳಲ್ಲಿ ಬೆಳೆಸುವ ಪ್ರಯತ್ನ ಸಾಗಿದೆ. ಆದರೂ ಸೆಣಬಿನ ಉತ್ಪಾದನೆ ವರ್ಷವರ್ಷವೂ ಏರಿಳಿತಗಳಿಗೆ ಒಳಗಾಗಿದೆ. ಕೈಗಾರಿಕೆಗೆ ಏಕರೀತಿಯಾಗಿ ಹಾಗೂ ನ್ಯಾಯವಾದ ಬೆಲೆಯಲ್ಲಿ ಕಚ್ಚಾ ಸೆಣಬನ್ನು ಒದಗಿಸುವ ಉದ್ದೇಶದಿಂದ ಸರ್ಕಾರ 1971ರಲ್ಲಿ ಭಾರತೀಯ ಸೆಣಬು ಸಂಸ್ಥೆಯನ್ನು ಸ್ಥಾಪಿಸಿತು. ಕಚ್ಚಾಸೆಣಬಿಗೆ ಬೆಂಬಲ ಬೆಲೆಯನ್ನು ನೀಡುವುದರ ಮೂಲಕ ಅದರ ಉತ್ಪಾದನೆಯನ್ನು ಉತ್ತೇಜಿಸುವುದು, ಕಾಪುದಾಸ್ತಾನು ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಗಿರಣಿಗಳಿಗೆ ಅದನ್ನು ಏಕರೀತಿಯಲ್ಲಿ ಸದಾ ಕಾಲ ಒದಗಿಸುವುದು ಹಾಗೂ ಸೆಣಬಿನ ಆಮದು-ರಫ್ತು ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಇವೇ ಮೊದಲಾದವು ಈ ಸಂಸ್ಥೆಯ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಇವೇ ಮೊದಲಾದವು ಈ ಸಂಸ್ಥೆಯ ಕಾರ್ಯಚಟುವಟಿಕೆಗಳು.

ಸೆಣಬು ಕೈಗಾರಿಕೆ ರಫ್ತು ಕೈಗಾರಿಕೆಯಾದರೂ ಭಾರತ ತನ್ನ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತಿದೆ. ಪ್ರಪಂಚದ ಒಟ್ಟು ಸೆಣಬು ರಫ್ತಿನಲ್ಲಿ ಒಂದನೆಯ ಯೋಜನೆಯ ಅವಧಿಯಲ್ಲಿ ಭಾರತದ ಪಾಲು ಶೇಕಡಾ 81ರಷ್ಡು ಇತ್ತು. ಆದರೆ 1970ರ ಹೊತ್ತಿಗೆ ಇದು ಶೇಕಡಾ 54ಕ್ಕೆ ಇಳಿಯಿತು. ಇದೇ ಅವಧಿಯಲ್ಲಿ ಪಾಕಿಸ್ತಾನ (ಈಗಿನ ಬಾಂಗ್ಲಾದೇಶವೂ ಸೇರಿ) ತನ್ನ ಪಾಲನ್ನು ಶೇಕಡಾ 6.7ರಿಂದ ಶೇ 37ಕ್ಕೆ ಏರಿಸಿತು. ಇದಕ್ಕೆ ಕಾರಣ ಅಲ್ಲಿಯ ಸರ್ಕಾರ ಕಚ್ಚಾಸೆಣಬಿನ ಉತ್ಪಾದನೆಯನ್ನು ದ್ವಿಗುಣಗೊಳಿಸಿದುದಲ್ಲದೆ ರಫ್ತಾದ ಸೆಣಬು ವಸ್ತುಗಳಿಗೆ ಶೇಕಡಾ 32ರಷ್ಟು ಧನಸಹಾಯ ನೀಡುತ್ತಿತ್ತು. ಭಾರತ ಸರ್ಕಾರವಾದರೋ ರಫ್ತುಗಳಿಗೆ ಧನಸಹಾಯ ಕೊಡುವುದಕ್ಕೆ ಬದಲು ಅವುಗಳ ಮೇಲೆ ರಫ್ತು ಸುಂಕವನ್ನು ಹೇರಿದೆ.

ಭಾರತದ ಸೆಣಬು ವಸ್ತುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಬಗೆಯ ಪೈಪೋಟಿ ಎದುರಿಸಬೇಕಾಗಿದೆ. ಒಂದನೆಯದು ಮುಂದುವರಿದ ರಾಷ್ಟ್ರಗಳಲ್ಲಿ ಕೃತಕ ನೂಲಿನಿಂದ ತಯಾರಿಸಲ್ಪಟ್ಟ ವಸ್ತುಗಳಿಂದ, ಎರಡನೆಯದು ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ತಯಾರಾದ ಸ್ವಾಭಾವಿಕ ಸೆಣಬು ವಸ್ತುಗಳಿಂದ. ಭಾರತ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳ ಪ್ರತಿನಿಧಿಗಳು ತಮ್ಮಲ್ಲಿಯ ಪೈಪೋಟಿ ನಿಯಂತ್ರಿಸಿಕೊಳ್ಳುವ ದೃಷ್ಟಿಯಿಂದ 1976ರಲ್ಲಿ ದೆಹಲಿಯಲ್ಲಿ ಸಮಾಲೋಚನೆ ನಡೆಸಿ ಒಂದು ಸೆಣಬು ರಫ್ತು ಸಂಸ್ಥೆಯನ್ನು ಸ್ಥಾಪಿಸುವ ಮಾತು ಕತೆ ನಡೆಸಿದುವು. ಆದರೆ ಯಾವುದೇ ರೀತಿಯ ಪೈಪೋಟಿಯನ್ನು ಭಾರತ ಎದುರಿಸಬೇಕಾದರೆ ಭಾರತದ ಸರಕುಗಳ ಬೆಲೆಗಳನ್ನು ಇಳಿಸುವುದೇ ಮುಖ್ಯವಾದ ಮಾರ್ಗ ಉತ್ಪಾದನ ಸಾಮಥ್ರ್ಯವನ್ನು ವೃದ್ಧಿಮಾಡುವುದು, ಉತ್ಪನ್ನ ವೆಚ್ಚವನ್ನು ಕಡಿಮೆ ಮಾಡುವುದು ಈ ಮಾರ್ಗಗಳಿಂದ ಬೆಲೆಯಿಳಿಕೆ ಸಾಧ್ಯ. ಕಾರ್ಖಾನೆಗಳಲ್ಲಿಯ ಹಳೆಯ ಯಂತ್ರೋಪಕರಣಗಳ ಬದಲು ಹೊಸವನ್ನು ಸ್ಥಾಪಿಸುವುದು, ಕಾರ್ಖಾನೆಗೆ ಹೊಸ ನಿರ್ವಹಣೆ ಮಾರ್ಗಗಳನ್ನು ಅನುಸರಿಸಿ ಅನಾವಶ್ಯಕ ವೆಚ್ಚಗಳನ್ನು ಮಿತಿಗೊಳಿಸುವುದರ ಮೂಲಕ ಸೆಣಬು ವಸ್ತುಗಳ ಬೆಲೆಗಳನ್ನು ಇಳಿಸಬಹುದು.
ಸಕ್ಕರೆ ಕೈಗಾರಿಕೆ : ಉತ್ಪಾದನ ಮೌಲ್ಯದಲ್ಲಿ ಸಕ್ಕರೆ ಕೈಗಾರಿಕೆ ಭಾರತದ ಮೂರನೆಯ ದೊಡ್ಡ ಕೈಗಾರಿಕೆ. ಇದು ಸುಮಾರು 2.5 ಕೋಟಿ ಮಂದಿ ಕಬ್ಬು ಬೆಳೆಸುವ ಉದ್ಯಮದಲ್ಲಿಯೂ ಸಕ್ಕರೆ ವ್ಯಾಪಾರ ಮತ್ತಿತರ ಸಂಬಂಧ ಕಲಾಪಗಳಲ್ಲಿಯೂ ನಿರತರಾಗಿರುವಂತೆ ಮಾಡಿದೆ. ಸಹಕಾರಿ ಕ್ಷೇತ್ರದ ಪಾತ್ರ ಇಲ್ಲಿಯ ಒಂದು ಗಮನಾರ್ಹ ಸಂಗತಿ. ಸಕ್ಕರೆ ಕೈಗಾರಿಕೆಯಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ವೃದ್ಧಿಸುತ್ತಿದೆ. 1974ರ ಹೊತ್ತಿಗೆ ಅವು ದೇಶದ ಸುಮಾರು ಶೇಕಡಾ 40ರಷ್ಟು ಸಕ್ಕರೆ ಉತ್ಪಾದನೆಗೆ ಕಾರಣವಾದುವು. ಎರಡನೆಯದಾಗಿ, ಸಕ್ಕರೆ ಕೈಗಾರಿಕೆ ಇತ್ತೀಚೆಗೆ ರಫ್ತು ಕೈಗಾರಿಕೆಯಾಗಿ ಬೆಳೆದು ಬರುತ್ತಿದೆ.

1932ರ ಮೊದಲು ಭಾರತದಲ್ಲಿ 31 ಸಕ್ಕರೆ ಕಾರ್ಖಾನೆಗಳಿದ್ದು ಅವು 1.6 ಲಕ್ಷ ಟನ್ ಸಕ್ಕರೆಯನ್ನು ಉತ್ಪಾದಿಸುತ್ತಿದ್ದುವು. ಆಂತರಿಕ ಅನುಭೋಗದ ಪೂರೈಕೆಯಾಗುತ್ತಿರಲಿಲ್ಲವಾದ್ದರಿಂದ ಸುಮಾರು 6 ಲಕ್ಷ ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. 1932ರಲ್ಲಿ ಈ ಕೈಗಾರಿಕೆಗೆ ರಕ್ಷಣೆಯನ್ನು ಕೊಟ್ಟ ಕಾರಣ ಅದು ಉತ್ತೇಜನ ಪಡೆದು 1937ರ ಹೊತ್ತಿಗೆ ಕಾರ್ಖಾನೆಗಳ ಸಂಖ್ಯೆ 137ಕ್ಕೆ ಏರಿ ಅವು ಸಾಲಿಯಾನ 10 ಲಕ್ಷ ಟನ್ ಸಕ್ಕರೆಯನ್ನು ತಯಾರಿಸುತ್ತಿದ್ದುವು. 1951ರಲ್ಲಿ ಕಬ್ಬಿಗೆ ಕನಿಷ್ಠ ಬೆಲೆಯನ್ನೂ ಸಕ್ಕರೆಗೆ ಗರಿಷ್ಠ ಬೆಲೆಯನ್ನೂ ನಿಗದಿಮಾಡಲಾದ ಕಾರಣ ಉತ್ಪಾದನೆ ಏರತು. ಸಕ್ಕರೆ ಉತ್ಪಾದನೆ ಕೃಷಿ ಆಧಾರಿತ ಕೈಗಾರಿಕೆಯಾದ್ದರಿಂದ ವರ್ಷ ವರ್ಷವೂ ಅನಿರ್ದಿಷ್ಟ ಏರಿಳಿತಗಳಿಗೆ ಒಳಗಾಗಿದ್ದು ಸಕ್ಕರೆ ಬೆಲೆಯಲ್ಲೂ ಏರಿಳಿತ ಉಂಟುಮಾಡುತ್ತಿತ್ತು. ಒಂದು ಸಾರಿ ಬೆಲೆಯನ್ನು ಹತೋಟಿಯಲ್ಲಿಡಲು ನಿಯಂತ್ರಣ ತಂದರೆ ಮತ್ತೊಂದು ಸಾರಿ (ಉದಾಹರಣೆಗೆ ಮೂರನೆಯ ಯೋಜನಾಧಿಯಲ್ಲಿ) ರಫ್ತು ಹೆಚ್ಚಿಸುವ ದೃಷ್ಟಿಯಿಂದ ನಿಯಂತ್ರಣ ಹಾಕಲಾಗುತ್ತಿತ್ತು. ಹಾಗೂ ರಫ್ತು ಹೆಚ್ಚಿಸುವ ಉದ್ದೇಶವನ್ನೂ ಸಾಧಿಸಲಾಯಿತು. ಹೀಗೆ ಎರಡನೆಯ ಯೋಜನೆಯ ಅಂತ್ಯದ ಹೊತ್ತಿಗಾಗಲೇ ಭಾರತ ಸಕ್ಕರೆಯನ್ನು ರಫ್ತು ಮಾಡಲು ಪ್ರಾರಂಭಿಸಿ 1974-75ರ ಹೊತ್ತಿಗೆ 9.4 ಲಕ್ಷ ಟನ್ನುಗಳನ್ನು ರಫ್ತು ಮಾಡಿತು. ಸಕ್ಕರೆ ಉತ್ಪಾದನೆ ಆ ವರ್ಷ 48 ಲಕ್ಷ ಟನ್ನುಗಳ ಮಟ್ಟ ಮುಟ್ಟಿತು. ಆದರೆ ಸಕ್ಕರೆ ಬೆಲೆ ನಿಯಂತ್ರಣದ ಬಗ್ಗೆ ಹೆಚ್ಚು ಸಾಫಲ್ಯ ಸಿಗಲಿಲ್ಲ. ಏಕೆಂದರೆ 1970-71 ಹಾಗೂ ವರ್ಷಗಳ ಅನಂತರದ ಸಕ್ಕರೆ ಉತ್ಪಾದನೆ ಅನುಕ್ರಮವಾಗಿ 37.4 ಲಕ್ಷ ಮತ್ತು 31.1 ಲಕ್ಷ ಟನ್ನುಗಳಿಗೆ ಇಳಿದ ಕಾರಣ ಸಕ್ಕರೆ ಬೆಲೆ ತೀವ್ರಗತಿಯಲ್ಲಿ ಏರಲುಪಕ್ರಮಿಸಿತು. ಆದಕಾರಣ 1971ರಲ್ಲಿ ತೊಡೆದು ಹಾಕಿದ ನಿಯಂತ್ರಣವನ್ನು 1972ರಲ್ಲಿ ಮತ್ತೆ ಜಾರಿಗೆ ತರಲಾಯಿತು.

ಸಕ್ಕರೆ ಆದಷ್ಟು ಕಡಿಮೆ ಬೆಲೆಗೆ ಗ್ರಾಹಕನಿಗೆ ದೊರಕುವಂತೆ ಮಾಡಲು ಕೈಗೊಂಡ ಸಕ್ಕರೆ ನಿಯಂತ್ರಣದ ಮುಖ್ಯಾಂಶವೆಂದರೆ ಕಾರ್ಖಾನೆಗಳು ತಮ್ಮ ಉತ್ಪಾದನೆಯ ಒಂದು ಭಾಗವನ್ನು (ಶೇಕಡಾ 60-70) ಸರ್ಕಾರ ನಿರ್ಧರಿಸಿದ ಬೆಲೆಗೆ ಸರ್ಕಾರಕ್ಕೆ ಮಾರಬೇಕು, ಉಳಿದ ಭಾಗವನ್ನು ನಿರುಪಾಧಿಕ ಮಾರುಕಟ್ಟೆಯಲ್ಲಿ ಮಾರುಕಟ್ಟೆ ನಿರ್ಧರಿಸುವ ಬೆಲೆಯಲ್ಲಿ ಗ್ರಾಹಕರಿಗೆ ಮಾರಬಹುದು. ಸರ್ಕಾರ ತಾನುಕೊಂಡ ಸಕ್ಕರೆಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಗ್ರಾಹಕರಿಗೆ ನ್ಯಾಯವಾದ ಬೆಲೆಯಲ್ಲಿ ಮಾರುವುದು. ಈ ವ್ಯವಸ್ಥೆ ಹೆಚ್ಚು ಕಡಿಮೆ ಸತತವಾಗಿ ನಡೆದು ಬಂದಿದೆ.
ಸಣ್ಣ ಮತ್ತು ಗುಡಿಸಲುಗಳ ಕೈಗಾರಿಕೆಗಳು : ಸ್ಥಳೀಯ ಕಚ್ಚಾವಸ್ತುಗಳು, ಕುಟುಂಬದ ಜನ ಬಲ ಹಾಗೂ ಸಾಂಪ್ರದಾಯಿಕ ಉತ್ಪಾದನಾತಂತ್ರ ಇವನ್ನು ಉಪಯೋಗಿಸಿ ತಯಾರಿಸಿದ ವಸ್ತುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಬಿಕರಿ ಮಾಡುವಂಥ ಕೈಗಾರಿಕೆಗಳನ್ನು ಗುಡಿಸಲು ಕೈಗಾರಿಕಾ ಕ್ಷೇತ್ರ ಒಳಗೊಂಡಿದೆ. ಈ ಕ್ಷೇತ್ರವನ್ನು ಸಣ್ಣ ಕಾರ್ಖಾನೆ ಕ್ಷೇತ್ರ, ಪುಟ್ಟ ಕಾರ್ಖಾನೆ ಕ್ಷೇತ್ರ ಮತ್ತು ಗುಡಿಸಲು ಕೈಗಾರಿಕಾಕ್ಷೇತ್ರ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು.

ಕೈಗಾರಿಕೀರಣದ ಪ್ರಥಮ ಹಂತಗಳಲ್ಲಿ ಸಣ್ಣ ಕೈಗಾರಿಕೆಗಳು ವಾಣಿಜ್ಯ ಕೇಂದ್ರಗಳೆನಿಸಿದ ಮುಂಬಯಿ, ಕಲ್ಕತ್ತ, ಮದ್ರಾಸ್ ನಗರಗಳಲ್ಲಿ ಕೇಂದ್ರೀಕರಿಸಿದ್ದುವು. ಇದಕ್ಕೆ ಕಾರಣ ಅಲ್ಲಿ ಸಿಗಬಹುದಾದ ನೀರು, ವಿದ್ಯುತ್ತು, ಸಾರಿಗೆ, ಹಣಕಾಸು, ಮಾರುಕಟ್ಟೆ ಮತ್ತು ಕುಶಲ ಕರ್ಮಚಾರಿಗಳೇ ಮೊದಲಾದ ಸೌಲಭ್ಯಗಳು. ಇವು ಮುಖ್ಯವಾಗಿ ಗ್ರಾಹಕ ವಸ್ತುಗಳನ್ನು ಮಾತ್ರ ಉತ್ಪಾದಿಸುವುದರಲ್ಲಿ ತೊಡಗಿದ್ದುವು. ಗುಡಿಸಲು ಕೈಗಾರಿಕೆಗಳು ಹಳ್ಳಿ ಪ್ರದೇಶಗಳಲ್ಲಿ ಮಾತ್ರ ಸ್ಥಾಪಿತವಾಗಿ, ಅಲ್ಲಿಯ ಆವಶ್ಯಕತೆಗಳನ್ನು ಪೂರೈಸುವ ಸರಕುಗಳನ್ನು ಎಂದರೆ ಮಡಕೆ. ಕಯ ಮಗ್ಗದ ಬಟ್ಟೆ. ಗಾಣದ ಎಣ್ಣೆ, ಬುಟ್ಟಿ ಮುಂತಾದವನ್ನು ಉತ್ಪಾದಿಸುವುದರಲ್ಲಿ ತೊಡಗಿದ್ದುವು.

ಸ್ವದೇಶಿ ಚಳವಳಿ ಮತ್ತು ಯುದ್ಧಗಳ ಕಾರಣದಿಂದ ಉಂಟಾದ ಬೇಡಿಕೆ, ಆಮದುಗಳ ಮೇಲೆ ಹೇರಿದ ತಡೆ ಇವುಗಳಿಂದ ಆಂತರಿಕವಾಗಿ ಕೈಗಾರಿಕಾ ಸರಕುಗಳಿಗೆ ಬೇಡಿಕೆ ಏರಿತು. ಈ ಅವಕಾಶಗಳು ಸಣ್ಣ ಕೈಗಾರಿಕೆಗಳ ಬೆಲೆವಣಿಗೆಯನ್ನು ಪ್ರವರ್ಧಿಸಿದುವು. ಹೀಗಾಗಿ ಸಣ್ಣ ಕಾರ್ಖಾನೆಗಳು ಅಧಿಕ ಸಂಖ್ಯೆಯಲ್ಲಿ ಸ್ಥಾಪಿತವಾದವಲ್ಲದೆ ಈ ಕ್ಷೇತ್ರದಲ್ಲಿ ಹೊಸವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳೂ ಅಸ್ತಿತ್ವಕ್ಕೆ ಬಂದುವು. ಇವುಗಳಲ್ಲಿ ಮುಖ್ಯವಾದವು ಸಾಮಾನ್ಯ ಮತ್ತು ವಿದ್ಯುತ್ ಎಂಜಿನಿಯರಿಂಗ್, ರಾಸಾಯನಿಕ ಮತ್ತು ಔಷಧ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳು.
ಆದರೆ ಎರಡನೆಯ ಮಹಾಯುದ್ಧಾನಂತರ ಬೇಡಿಕೆ ಕಡಿಮೆಗೊಂಡ ಕಾರಣ ಅನೇಕ ಸಣ್ಣ ಕೈಗಾರಿಕೆಗಳಲ್ಲಿ ಉತ್ಪಾದನೆ ಇಳಿಮುಖಗೊಂಡುದಲ್ಲದೆ ಅವು ಆರ್ಥಿಕ ಮುಗ್ಗಟ್ಟಿಗೆ ಒಳಗಾದವು. ಬಂಡವಾಳ, ತಾಂತ್ರಿಕತೆ ಹಾಗೂ ತಂತ್ರವಿದರ ಅಭಾವ ಮತ್ತು ತೀವ್ರ ನಿರುದ್ಯೋಗ ಸಮಸ್ಯೆಯನ್ನು ಅನುಭವಿಸುವ ನಮ್ಮ ದೇಶದಲ್ಲಿ ಈ ಕೈಗಾರಿಕೆಗಳ ಪಾತ್ರ ಮಹತ್ತ್ವದ್ದು ಎಂಬುದನ್ನರಿತ ಸರ್ಕಾರ ಅವುಗಳ ವೃದ್ಧಿಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತ ಬಂದಿದೆ.

ಒಂದನೆಯ ಯೋಜನೆಯಲ್ಲಿ ಈ ಕೈಗಾರಿಕೆಗಳ ಬೆಳವಣಿಗಾಗಿ ರೂ 49 ಕೋಟಿ ವಿನಿಯೋಜಿಸುವ ಯೋಜನೆ ಹಾಕಿಕೊಳ್ಳಲಾಯಿತು. ಅಲ್ಲದೆ ಅವುಗಳ ಸರ್ವತೋಮುಖ ಬೆಳೆವಣಿಗೆಯನ್ನು ಪ್ರವರ್ತನಗೊಳಿಸುವ ದೃಷ್ಟಿಯಿಂದ ಸರ್ಕಾರ ಅನೇಕ ಮಂಡಳಿಗಳನ್ನು ಸ್ಥಾಪಿಸಿತು. ಹೀಗಾಗಿ ಕೈಮಗ್ಗ, ಖಾದಿ ಮತ್ತು ಗ್ರಾಮೋದ್ಯೋಗ, ರೇಷ್ಮೆ ಮತ್ತು ತೆಂಗಿನ ನಾರಿನ ಕೈಗಾರಿಕೆಗಳ ಸಮಸ್ಯೆಗಳನ್ನು ಪರಿಶೀಲಿಸಿ ತಕ್ಕ ಕ್ರಮಗಳನ್ನು ಕೈಗೊಳ್ಳುವ ಅಖಿಲ ಭಾರತ ಮಂಡಲಿಗಳನ್ನು ಸ್ಥಾಪಿಸಲಾಯಿತು. ಸಣ್ಣ ಕೈಗಾರಿಕೆಗಳಿಗೆ ತಾಂತ್ರಿಕ ಸಲಹೆ ಹಾಗೂ ಸಹಾಯ ನೀಡುವ ದೃಷ್ಟಿಯಿಂದ ನಾಲ್ಕು ಪ್ರಾದೇಶಿಕ ಸಣ್ಣ ಕೈಗಾರಿಕಾ ಸೇವಾ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಈ ಕೈಗಾರಿಕಾ ವಸ್ತುಗಳ ಮಾರಾಟದಲ್ಲಿ ಸಲಹೆ ಹಾಗೂ ಸಹಾಯ ನೀಡುವಂಥ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮವನ್ನು ಸ್ಥಾಪಿಸಲಾಯಿತು. ಈ ನಿಗಮ ಸರ್ಕಾರಿ ಹಾಗೂ ಸೈನಿಕ ವಿಭಾಗಗಳು ತಮ್ಮ ಅಗತ್ಯಗಳನ್ನು ಕೊಳ್ಳುವುದರಲ್ಲಿ ಸಮರ್ಪಕ ಪಾಲು ಈ ಸಣ್ಣ ಕೈಗಾರಿಕೆಗಳ ವಸ್ತುಗಳಿಗೆ ದೊರಕುವಂತೆ ಸಹಾಯ ಮಾಡುತ್ತದೆ.

1056ರ ಕೈಗಾರಿಕಾ ನೀತಿಗೆ ಅನುಸಾರವಾಗಿ ಭೇದಕಾರಕ ತೆರೆಗೆ ವಿಧಿಸುವ ಅಥವಾ ಸಹಾಯಧನ ನೀಡುವ ಮೂಲಕ ಹಾಗೂ ದೊಡ್ಡ ಪ್ರಮಾಣದ ಕೈಗಾರಿಕೆಗಳ ಉತ್ಪಾದನೆಯ ಪ್ರಮಾಣದ ಮೇಲೆ ತಡೆ ಹೇರುವುದರ ಮೂಲಕ ಸಣ್ಣ ಮತ್ತು ಗುಡಿಸಲು ಕೈಗಾರಿಕೆಗಳಿಗೆ ಎರಡನೆಯ ಯೋಜನೆಯ ಕಾಲದಿಂದ ಒಂದು ಬಗೆಯ ರಕ್ಷಣೆಯನ್ನು ನೀಡಲಾಗಿದೆ. 1955ರ ಕರ್ವೆ ಸಮಿತಿಯ ಸಲಹೆ ಮೇರೆಗೆ ಎರಡನೆಯ ಯೋಜನೆಯಲ್ಲಿ 120 ಕೈಗಾರಿಕಾ ನೆಲೆಗಳನ್ನು ಮಂಜೂರು ಮಾಡಿ ಆ ಪೈಕಿ 60ನ್ನು ಸ್ಥಾಪಿಸಲಾಯಿತು. ಈ ಅವಧಿಯಲ್ಲಿ ಸಣ್ಣ ಕೈಗಾರಿಕಾ ಸೇವಾ ಸಂಸ್ಥೆಗಳನ್ನು ಎಲ್ಲ ರಾಜ್ಯಗಳಲ್ಲೂ ಸ್ಥಾಪಿಸಿದುದಲ್ಲದೆ ತಾಂತ್ರಿಕ ಹಾಗೂ ಮಾರುಕಟ್ಟೆ ಬಗ್ಗೆ ಸಲಹೆ ನೀಡುವ ದೃಷ್ಟಿಯಿಂದ 42 ಪ್ರಚಾರ ಕೇಂದ್ರಗಳನ್ನೂ ದೇಶಾದ್ಯಂತ ಸ್ಥಾಪಿಸಲಾಯಿತು. ಈ ಎಲ್ಲ ಕಲಾಪಗಳಿಗೆ ಎರಡನೆಯ ಯೋಜನೆಯಲ್ಲಿ ರೂ 175 ಕೋಟಿ ನಿಗದಿಸಲಾಗಿತ್ತು.

ಮೂರನೆಯ ಯೋಜನೆಯಲ್ಲಿ ಈ ಕೈಗಾರಿಕೆಗಳ ಅಭಿವೃದ್ಧಿಗಾಗಿ ರೂ 236 ಕೋಟಿ ವಿನಿಯೋಜಿಸಲ್ಪಟ್ಟಿತು. 234 ಕೈಗಾರಿಕಾ ನೆಲೆಗಳನ್ನು ಸ್ಥಾಪಿಸಲಾಯಿತು. ಸಣ್ಣ ಮತ್ತು ಗುಡಿಸಲು ಕೈಗಾರಿಕೆಗಳ ಹಣಕಾಸಿನ ಆವಶ್ಯಕತೆಗಳನ್ನು ರೂಪಿಸಲಾಯಿತು. ಈ ಯೋಜನೆಯ ಪ್ರಕಾರ ಸಣ್ಣ ಕೈಗಾರಿಕೆಗಳು ಪಡೆಯುವ ಸಾಲದ ಹಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಖಾತರಿ ನೀಡತೊಡಗಿತು. 1961-62ರಲ್ಲಿ ರೂ 7.6 ಕೋಟಿ ಸಾಲಕ್ಕೆ ರಿಸರ್ವ್ ಬ್ಯಾಂಕ್ ಗ್ಯಾರಂಟಿ ಕೊಟ್ಟು ಸಣ್ಣ ಕೈಗಾರಿಕೆಗಳಿಗೆ ಸಹಾಯ ನೀಡಿತು.

ನಾಲ್ಕನೆಯ ಮತ್ತು ಐದನೆಯ ಯೋಜನೆಗಳಲ್ಲಿ ಸಣ್ಣ ಮತ್ತು ಗುಡಿಸಲು ಕೈಗಾರಿಕೆಗಳ ಅಭಿವೃದ್ಧಿಗಾಗಿ ಗಮನಾರ್ಹವಾದ ಹೊಸ ಕಾರ್ಯಕ್ರಮಗಳಾವುದನ್ನೂ ಜಾರಿಗೆ ತರಲಿಲ್ಲ. 1977ರ ಡಿಸೆಂಬರಿನಲ್ಲಿ ಪ್ರಕಟಿಸಿದ ಕೈಗಾರಿಕಾ ನೀತಿಯ ಪ್ರಕಾರ ಸರ್ಕಾರ ಈ ಕ್ಷೇತ್ರದ ವೃದ್ಧಿಯನ್ನು ಪ್ರವರ್ತನಗೊಳಿಸುವ ಕ್ರಮಗಳನ್ನು ನಮೂದಿಸಿದೆ. ಅವುಗಳಲ್ಲಿ ಮುಖ್ಯವಾದುದೆಂದರೆ ಈ ವಲಯದಲ್ಲಿ ಯಾವ ಯಾವ ವಸ್ತುಗಳನ್ನು ಉತ್ಪಾದಿಸಲು ಸಾಧ್ಯವೋ ಅಂಥ ವಸ್ತುಗಳನ್ನು ಇದೇ ವಲಯದಲ್ಲಿ ಉತ್ಪಾದಿಸಬೇಕೆಂಬ ಹೇಳಿಕೆ. ಸುಮಾರು 500 ವಸ್ತುಗಳು ಈ ವಲಯದಲ್ಲೇ ಉತ್ಪಾದನೆಯಾಗುವಂತೆ ಕಾಯ್ದಿಡಲಾಗಿದೆ. ಎರಡನೆಯದಾಗಿ, ವಿಶೇಷ ಜಿಲ್ಲಾ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿ ಸಣ್ಣ ಮತ್ತು ಗುಡಿಸಲು ಕೈಗಾರಿಕೆಗಳ ಆವಶ್ಯಕತೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವುಗಳಿಗೆ ವಹಿಸಿಕೊಡಲಾಗಿದೆ.

ಕೈಗಾರಿಕಾ ವ್ಯವಸ್ಥೆ : ಭಾರತದ ಕೈಗಾರಿಕಾ ವ್ಯವಸ್ಥೆ ಅದರ ನೀತಿ, ನಿಯಂತ್ರಣ ಮತ್ತು ಯೋಜನೆಗಳನ್ನವಲಂಬಿಸಿದೆ. ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಕುರಿತಂತೆ ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಮುಖ್ಯವಾಗಿ 1945, 1956, 1970, 1973 ಮತ್ತು 1977ರಲ್ಲಿ ತನ್ನ ಕೈಗಾರಿಕಾ ನೀತಿ ನಿರೂಪಣೆಯನ್ನು ಪ್ರಕಟಿಸಿತು. ಅದರ ಮುಖ್ಯಧ್ಯೇಯಗಳು ಇವು : ಸರ್ಕಾರಿವಲಯದ ವಿಸ್ತರಣೆ, ಸಹಕಾರಿ ಮತ್ತು ಜಂಟಿ ಕೈಗಾರಿಕೆಗಳನ್ನು ವೃದ್ಧಿಪಡಿಸುವುದು, ಸಣ್ಣ ಮತ್ತು ಗುಡಿಸಿಲು ಕೈಗಾರಿಕೆಗಳನ್ನು ಉತ್ತೇಜಿಸುವುದು.

ಸರ್ಕಾರಿ ವಲಯ : ಸರ್ಕಾರದ ಈ ಕೈಗಾರಿಕಾ ನೀತಿಯಂತೆ ಎಲ್ಲ ಮೂಲ ಕೈಗಾರಿಕೆಗಳು, ಯುದ್ಧೋಪಕರಣಕ್ಕೆ ಸಂಬಂಧಿಸಿದ ಹಾಗೂ ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಕೈಗಾರಿಕೆಗಳು ಸರ್ಕಾರಿ ವಲಯದಲ್ಲಿ ಇರಬೇಕೆಂಬುದನ್ನು ಪ್ರಕಟಿಸಿದೆ. ಆವಶ್ಯಕ ವಸ್ತುಗಳನ್ನು ಉತ್ಪಾದಿಸುವ, ಆದರೆ ಖಾಸಗಿ ಉದ್ಯಮಿಗಳಿಗೆ ಹವಣಿಸಲಾಗದಷ್ಟು ಬಂಡವಾಳವನ್ನು ಹೂಡಬೇಕಾಗುವ ಕೈಗಾರಿಕೆಗಳನ್ನೂ ಈ ವಲಯಕ್ಕೆ ಸೇರಿಸಲಾಗುತ್ತದೆ. ಖಾಸಗಿ ಮತ್ತು ಸರ್ಕಾರಿ ವಲಯದ ಕೈಗಾರಿಕೆಗಳನ್ನು ಬೇರ್ಪಡಿಸುವ ದೃಷ್ಟಿಯಿಂದ 1956ರ ಕೈಗಾರಿಕಾ ನೀತಿ ನಿರೂಪಣೆಯಲ್ಲಿ ಕೈಗಾರಿಕೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಂದನೆಯದರಲ್ಲಿ 17 ಕೈಗಾರಿಕೆಗಳನ್ನು ಸೇರಿಸಿ ಅವುಗಳ ಭವಿಷ್ಯತ್ತಿನ ಸ್ವಾಮ್ಯ ಹಾಗೂ ನಿರ್ವಹಣೆ ಪ್ರತ್ಯೇಕವಾಗಿ ಸರ್ಕಾರದ್ದೇ ಎಂಬುದಾಗಿ ಪ್ರಕಟಿಸಲಾಯಿತು. ಇದರಲ್ಲಿ ಸೇರಿಸಿದ ಕೈಗಾರಿಕಗಳ ಪೈಕಿ ಮುಖ್ಯವಾದವು ಯುದ್ಧ ಸಾಮಗ್ರಿಗಳು, ಪರಮಾಣು ಶಕ್ತಿ, ಕಬ್ಬಿಣ ಮತ್ತು ಉಕ್ಕು, ಕಲ್ಲಿದ್ದಲು, ರೈಲು ಸಾರಿಗೆ, ಹಡಗು ತಯಾರಿಕೆ, ವಿದ್ಯುತ್ ಮತ್ತು ದೂರವಾಣಿ ತಯಾರಿಕೆಗಳು. ಎರಡನೆಯದರಲ್ಲಿ ಅಲ್ಯೂಮಿನಿಯಮ್, ಯಂತ್ರೋಪಕರಣಗಳು, ಅತ್ಯಾವಶ್ಯಕ ಔಷಧಿಗಳು, ರಸಗೊಬ್ಬರ, ರಸ್ತೆ ಮತ್ತು ಸಮುದ್ರ ಸಾರಿಗೆ ಮೊದಲಾದ 12 ಕೈಗಾರಿಕೆಗಳನ್ನು ನಮೂದಿಸಿ ಇವನ್ನು ಕ್ರಮೇಣ ಸರ್ಕಾರಿ ವಲಯಕ್ಕೆ ಸೇರಿಸಿಕೊಳ್ಳಲಾಗುವುದು. ಉಳಿದ ಕೈಗಾರಿಕೆಗಳು ಮೂರನೆಯ ವಿಭಾಗದಲ್ಲಿ ಬರುತ್ತವೆ. ಅವನ್ನು ಖಾಸಗಿ ಕ್ಷೇತ್ರಕ್ಕೆ ಬಿಟ್ಟುಕೊಡಲಾಗುವುದೆಂದೂ ಪ್ರಕಟಿಸಲಾಯಿತು.

ಇದರಂತೆ ಮುಖ್ಯ ಕೈಗಾರಿಕೆಗಳು ಬೆಳೆವಣಿಗೆಯ ಜವಾಬ್ದಾರಿಯನ್ನು ಹೊತ್ತ ಸರ್ಕಾರ ಈ ಜವಾಬ್ದಾರಿಯನ್ನು ಸರ್ಕಾರಿ ವಲಯವನ್ನು ವಿಸ್ತರಿಸುವ ಮೂಲಕ ನಿರ್ವಹಿಸಲು ಪ್ರಾರಂಭಿಸಿತು. ಕಬ್ಬಿಣ ಮತ್ತು ಉಕ್ಕು, ರಸಗೊಬ್ಬರ, ಎಲೆಕ್ಟ್ರಾನಿಕ್ಸ್ ವಸ್ತುಗಳು ಸಾಮಾನ್ಯ ಹಾಗೂ ಗಣಿ ಯಂತ್ರೋಪಕರಣಗಳು, ದೊಡ್ಡ ವಿದ್ಯುತ್ ಉಪಕರಣಗಳು ಮುಂತಾದವನ್ನು ಉತ್ಪಾದಿಸುವಂಥ ಅನೇಕ ಮುಖ್ಯ ಹಾಗೂ ಅಧಿಕ ಬಂಡವಾಳ ಹಿಡಿಸುವ ಕಾರ್ಖಾನೆಗಳನ್ನು ಸ್ಥಾಪಿಸಿತು. ಇದರಿಂದಾಗಿ ಸರ್ಕಾರಿವಲಯ ಬೆಳೆಯಲಾರಂಭಿಸಿದೆ.

ಸರ್ಕಾರಿ ವಲಯವನ್ನು ವಿಸ್ತರಿಸುವುದರ ಜೊತೆಗೆ ಜಂಟಿವಲಯವನ್ನೂ ಬೆಳೆಸಿ ವಿಸ್ತರಿಸುವುದು ಕೈಗಾರಿಕಾ ನೀತಿಯ ಧ್ಯೇಯ. ಜಂಟಿ ಕ್ಷೇತ್ರ ಸರ್ಕಾರಿ ಹಾಗೂ ಖಾಸಗಿ ಬಂಡವಾಳಗಳ ಒಂದು ಬಗೆಯ ಕೈಗಾರಿಕಾ ಪಾಲುಗಾರಿಕೆ. ಯಾವುದೇ ಕಾರ್ಖಾನೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಂಡವಾಳ ಹೂಡಲಾಗಿದ್ದು ಆ ಕಾರ್ಖಾನೆ ಖಾಸಗಿ ಮತ್ತು ಸರ್ಕಾರಿ ಉದ್ಯಮಿಗಳಿಂದ ನಿರ್ವಹಿಸಲ್ಪಡುವಂತಿದ್ದರೆ ಅಂಥ ಕಾರ್ಖಾನೆ ಜಂಟಿ ವಲಯದ್ದು ಎನಿಸುತ್ತದೆ. 1956ರ ಕೈಗಾರಿಕಾ ನೀತಿ ನಿರೂಪಣೆ ಖಾಸಗಿ ವಲಯದ ಕಾರ್ಖಾನೆಗಳು ಸರ್ಕಾರದ ಸಹಕಾರದಿಂದ ವಿಸ್ತರಿಸಬಹುದೆಂದು ಹೇಳುವುದರ ಮೂಲಕ ಜಂಟಿವಲಯಕ್ಕೆ ಬುನಾದಿ ಹಾಕಿಕೊಟ್ಟಿತು. ಜಂಟಿವಲಯದ ಭಾವನೆಯನ್ನು ದತ್ ಸಮಿತಿ (1969) ಅನುಮೋದಿಸಿದ ಮೇಲೆ ಸರ್ಕಾರ ತನ್ನ 1970 ಮತ್ತು 1973ರ ಕೈಗಾರಿಕಾ ನೀತಿ ನಿರೂಪಣೆಗಳಲ್ಲಿ ಅದಕ್ಕೆ ಮಹತ್ತ್ವ ನೀಡಿ ಉತ್ತೇಜಿಸಿತು. ಸರ್ಕಾರದ ಪ್ರೋತ್ಸಾಹದ ಕಾರಣದಿಂದ ಈ ವಲಯ ಗಮನಾರ್ಹವಾಗಿ ಬೆಳೆಯುತ್ತ ಬಂದಿದೆ. ಹೀಗೆ ಈ ವಲಯದಲ್ಲಿ 1974-75ರ ಹೊತ್ತಿಗೆ 1307 ಕಾರ್ಖಾನೆಗಳಿದ್ದುವು. ಅವು ಕಾರ್ಖಾನೆ ಕ್ಷೇತ್ರದ ಶೇಕಡಾ 6.85ರಷ್ಟು ಉತ್ಪಾದಿಸಿ ಶೇಕಡಾ 5.19ರಷ್ಟು ಉದ್ಯೋಗಾವಕಾಶಗಳಿಗೂ ಶೇಕಡಾ 5.99ರಷ್ಟು ಉತ್ಪಾದನ ಬಂಡವಾಳಕ್ಕೂ ಕಾರಣವಾಗಿವೆ.

	ಕೈಗಾರಿಕಾ ನಿಯಂತ್ರಣ: ಸರ್ಕಾರ ಪರವಾನೆಗಳನ್ನು ನೀಡುವ ಮೂಲಕ ಕೈಗಾರಿಕಾ ನಿಯಂತ್ರಣ ಕೈಗೊಳ್ಳುತ್ತದೆ. 1951ರ ಕೈಗಾರಿಕೆಗಳ (ಬೆಳೆವಣಿಗೆ ಮತ್ತು ನಿಯಂತ್ರಣ) ಅಧಿನಿಯಮ ಕೈಗಾರಿಕೆಗಳ ಬೆಳೆವಣಿಗೆ ನಿಯಂತ್ರಿಸುವ ಅಧಿಕಾರವನ್ನು ಸರ್ಕಾರಕ್ಕೆ ಕೊಟ್ಟಿದೆ. ಅಧಿನಿಯಮದ ಪ್ರಕಾರ ಎಲ್ಲ ಕಾರ್ಖಾನೆಗಳೂ ನೋಂದಣಿ ಆಗಬೇಕು. ಪರವಾನೆಯಿಲ್ಲದ ಯಾವ ಕಾರ್ಖಾನೆಯನ್ನೂ ಸ್ಥಾಪಿಸುವಂತಿಲ್ಲ. ಅಥವಾ ವಿಸ್ತರಿಸುವಂತಿಲ್ಲ. ತೃಪ್ತಿಕರ ರೀತಿಯಲ್ಲಿ ನಿರ್ವಹಿಸಲ್ಪಡದ ಕಾರ್ಖಾನೆಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಬಹುದು. ಈ ಬಗೆಯ ಕೈಗಾರಿಕಾ ನಿಯಂತ್ರಣದ ಮುಖ್ಯ ಗುರಿಯೆಂದರೆ ಕೈಗಾರಿಕೆಗಳು ತೃಪ್ತಿಕರವಾಗಿ ನಿರ್ವಹಿಸಲ್ಪಡುವಂತೆ ಮಾಡುವುದಲ್ಲದೆ ದೇಶದಲ್ಲಿ ಸಮತೋಲವಾಗಿ ಕೈಗಾರಿಕೆಗಳ ಬೆಳೆವಣಿಗೆಯಾಗುವಂತೆ ಎಚ್ಚರಿಕೆ ವಹಿಸುವುದು ಹಾಗೂ ಖಾಸಗಿ ಏಕ ಸ್ವಾಮ್ಯ ಮತ್ತು ಆರ್ಥಿಕ ಬಲ ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕರಿಸುವುದನ್ನು ತಪ್ಪಿಸುವುದು ಕೂಡ.

	ಖಾಸಗಿ ಏಕಸ್ವಾಮ್ಯ ನಿರೋಧ: ಖಾಸಗಿ ಏಕಸ್ವಾಮ್ಯವನ್ನು ತಡೆಯುವುದು ಕೈಗಾರಿಕಾ ನಿಯಂತ್ರಣದ ಅತಿ ಮುಖ್ಯ ಧ್ಯೇಯ. ನೂತನ ಕೈಗಾರಿಕೋದ್ಯಮಿಗಳನ್ನು ಉತ್ತೇಜಿಸುವುದು, ತನ್ಮೂಲಕ ಆರ್ಥಿಕ ಬಲ ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರಿಕರಿಸಿದಂತೆ ಎಚ್ಚರಿಕೆ ವಹಿಸುವುದು-ಈ ಕಾರ್ಯಕ್ಕಾಗಿ ಪರವಾನೆ ಕ್ರಮವನ್ನು ಸರ್ಕಾರ ವಹಿಸಿಕೊಂಡಿದೆ. ಹೊಸ ಉದ್ಯಮಗಳನ್ನು ಪ್ರಾರಂಭಿಸಬೇಕಾದಾಗ, ಕಾರ್ಖಾನೆಯ ಉತ್ಪಾದನ ಶಕ್ತಿಯನ್ನು ವಿಸ್ತರಿಸಬೇಕಾದರೆ, ಹೊಸ ಸರಕನ್ನು ಉತ್ಪಾದಿಸಬೇಕಾದರೆ ಉದ್ಯಮಿ ಪರವಾನೆ ಪಡೆಯಬೇಕಾಗುತ್ತದೆ. ಪರವಾನೆಯನ್ನು ಒಂದು ಸಾಧನವಾಗಿ ಉಪಯೋಗಿಸಿಕೊಂಡು ಈ ಧ್ಯೇಯಗಳನ್ನು ಸಾಧಿಸುವುದು ಸರ್ಕಾರದ ಉದ್ದೇಶ.

ಆದರೆ ಪರವಾನೆ ಹಂಚಿಕೆಯ ಕಾರ್ಯಕ್ರಮದ ಪರಿಶೀಲನೆಗಾಗಿ ನೇಮಿಸಿದ ಅನೇಕ ತನಿಖಾಸಮಿತಿಗಳು ಕೈಗಾರಿಕೆಯ ಬೆಳೆವಣಿಗೆ ಖಾಸಗಿ ಏಕಸ್ವಾಮ್ಯ ಹಾಗೂ ಆರ್ಥಿಕ ಬಲವಾದ ಕೇಂದ್ರಿಕರಣವನ್ನು ತೊಡಿದುಹಾಕುವ ಬದಲು ಅವನ್ನು ಅಧಿಕಗೊಳಿಸಿದೆ ಎಂಬುದನ್ನು ಎತ್ತಿತೋರಿಸಿವೆ. 1964ರ ಮಹಲ ನೋಬಿಸ್ ಸಮಿತಿ 20 ಪ್ರಮುಖ (ರೂ 20 ಕೋಟಿ ಆಸ್ತಿ ಇರುವ) ಕೈಗಾರಿಕಾ ಕುಟುಂಬಗಳು ಕೈಗಾರಿಕೆಗಳ ಮೇಲಿನ ಸ್ವಾಮ್ಯ 1957-58ರ ಅವಧಿಯಲ್ಲಿ ಹೆಚ್ಚಾಗಿದೆ ಎಂಬುದನ್ನು ತೋರಿಸಿಕೊಟ್ಟಿತು. ಸುಮಾರು ನೂರು ಸರಕುಗಳನ್ನು ಆಯ್ದು ಸರಕುವಾರು ಕೇಂದ್ರಿಕರಣವನ್ನು ಪರಿಶೀಲಿಸಿದ 1965ರ ಏಕಸ್ವಾಮ್ಯ ತನಿಖಾ ಸಮಿತಿ ಕೊನೆಯ 65 ಸರಕುಗಳ ಬಗ್ಗೆ ದೊಡ್ಡ ಕೈಗಾರಿಕಾ ಕುಟುಂಬಗಳು ಅಧಿಕ ಸ್ವಾಮ್ಯ ಹೊಂದಿವೆ ಎಂದು ತೋರಿಸಿತು. ಪರವಾನೆ ಬಗ್ಗೆ ಹಜಾರಿಯವರು ಕೈಗೊಂಡ ಅಧ್ಯಯನದಿಂದ ಹೊರಬಂದ ಅಂಶಗಳನ್ನು ಗುರುತಿಸಿ 1967ರಲ್ಲಿ ನೇಮಿಸಲಾದ ಕೈಗಾರಿಕಾ ಪರವಾನೆ ನೀತಿ ತನಿಖಾ ಸಮಿತಿ (ದತ್ ಸಮಿತಿ) ಇನ್ನೂ ಕೆಲವು ಅಂಶಗಳನ್ನು ಹೊರಗೆಡಹಿತು. ಹೀಗೆ ದೊಡ್ಡ ಕೈಗಾರಿಕಾ ಕುಟುಂಬಗಳು 51 ಸರಕುಗಳ ಬಗ್ಗೆ ಶೇಕಡಾ 50ಕ್ಕೂ ಮೀರಿದ ಪರವಾನೆಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿವೆ ಎಂದೂ ಪಡೆದ ಪರವಾನೆಗಳನ್ನು ಅನುಷ್ಠಾನಕ್ಕೆ ತರಲಿಲ್ಲವೆಂದೂ ಕೆಲವೇ ಕೈಗಾರಿಕಾ ಕುಟುಂಬಗಳು ಅಧಿಕ ಪರವಾನೆಗಳನ್ನು ಪಡೆಯಲು ಶಕ್ತವಾಗಿವೆ ಎಂದೂ ಸಮಿತಿ ತೋರಿಸಿಕೊಟ್ಟುದಲ್ಲದೆ ಪ್ರಭಾವಿತ ಕೈಗಾರಿಕೋದ್ಯಮಿಗಳು ಪರವಾನೆ ನೀತಿಯ ಧ್ಯೇಯವನ್ನು ವಿಫಲಗೊಳಿಸಿರುವರೆಂದೂ ಅಭಿಪ್ರಾಯಪಟ್ಟಿತು.

	ಪ್ರಭಾವಿತ ದೊಡ್ಡ ಕೈಗಾರಿಕೋದ್ಯಮ ಕುಟುಂಬಗಳು ಕೆಲವು ಕೈಗಾರಿಕೆಗಳ ಹಾಗೂ ಕೆಲವು ವಸ್ತುಗಳ ಮೇಲೆ ಇಟ್ಟಿರುವ ಬಿಗಿತವನ್ನು ಸಡಿಲಿಸುವ ದೃಷ್ಟಿಯಿಂದ ದತ್ ಸಮಿತಿಯ ಸಲಹೆಯ ಮೇರೆಗೆ ಸರ್ಕಾರ ತನ್ನ 1970 ಮತ್ತು 1973ರ ಕೈಗಾರಿಕಾ ನೀತಿಯ ನಿರೂಪಣೆಗಳನ್ನು ಹೊರಡಿಸುವುದರ ಮೂಲಕ ಪರವಾನೆ ಕಾರ್ಯ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ತಂದಿತು. ಹೀಗೆ ಕೈಗಾರಿಕಾ ವಲಯವನ್ನು ಮೂಲ, ಸಂದಿಗ್ಧ ಮತ್ತು ಯುದ್ಧೋಪಕರಣಗಳ ಕೈಗಾರಿಕೆಗಳುಳ್ಳ ತಿರುಳು ಕ್ಷೇತ್ರ, ರೂ 5 ಕೋಟಿಗೆ ಮಿÁರಿದ ಹೂಟೆ ಬೇಕಾಗುವ ಕಾರ್ಖಾನೆಗಳುಳ್ಳ ದೊಡ್ಡ ಕೈಗಾರಿಕಾ ಕ್ಷೇತ್ರ ರೂ 1 ಕೋಟಿಯಿಂದ ರೂ 5 ಕೋಟಿ ಬಂಡವಾಳ ಬೇಕಾಗುವ ಕಾರ್ಖಾನೆಗಳ ಮಧ್ಯಮ ಕೈಗಾರಿಕಾ ಕ್ಷೇತ್ರ ಹಾಗೂ ರೂ 1 ಕೋಟಿಗೂ ಕಡಿಮೆ ಬಂಡವಾಳ ಬೇಕಾಗುವ ಕಾರ್ಖಾನೆಗಳ ಸಣ್ಣ ಕೈಗಾರಿಕೆಗಳ ಕ್ಷೇತ್ರ ಎಂದು ವಿಭಾಗಿಸಲಾಯಿತು. ದೊಡ್ಡ ಕೈಗಾರಿಕಾ ಕುಟುಂಬಗಳು ಮತ್ತು ಹೊರದೇಶದ ಉದ್ಯಮಿಗಳು ಮೊದಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಭಾಗವಹಿಸುವಂತೆ ಮಾಡಿ ಉಳಿದ ಕ್ಷೇತ್ರಗಳಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಕೊಡುವ ಪರವಾನೆಗಳ ಬಗ್ಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಗೆ ಆದ್ಯತೆ ಕೊಡುವಂತಾಯಿತು. ಈ ಕ್ರಮದಿಂದ ದೊಡ್ಡ ಕೈಗಾರಿಕಾ ಕುಟುಂಬಗಳು ಎಲ್ಲ ಕೈಗಾರಿಕೆಗಳಲ್ಲೂ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರಭಾವವನ್ನು ಬೀರದಿರುವಂತೆ ತಡೆಗಟ್ಟುವ ಆಸೆ.

	ಪ್ರಾದೇಶಿಕ ಪ್ರಸಾರ: ಕೈಗಾರಿಕಾ ನೀತಿ ಕೈಗಾರಿಕೆಗಳ ಪ್ರಾದೇಶಿಕ ಸಮತೋಲನವನ್ನು ಪ್ರವರ್ತಿಸಲು ಪ್ರಾಧಾನ್ಯ ನೀಡಿ ಕೈಗಾರಿಕೆಗಳ ಬೆಳೆವಣಿಗೆಯನ್ನು ನಿಯಂತ್ರಿಸುವುದರ ಮೂಲಕ ಅವುಗಳ ಪ್ರಾದೇಶಿಕ ಪ್ರಸಾರವನ್ನು ಉತ್ತೇಜಿಸುವ ಧ್ಯೇಯವನ್ನಿಟ್ಟುಕೊಂಡಿದೆ. ಆದರೆ ಈ ಧ್ಯೇಯವನ್ನು ಸರ್ಕಾರ ಸಾಧಿಸುವುದರಲ್ಲಿ ಅಸಮರ್ಥವಾಗಿದೆ. ಹೇಗೆಂದರೆ ಕೈಗಾರಿಕೆಗಳು ಮಹಾರಾಷ್ಟ್ರ ಮತ್ತು ಪಶ್ಚಿಮಬಂಗಾಳಿಗಳಲ್ಲಿ ಹಾಗೂ ಮುಂಬಯಿ ಮತ್ತು ಕಲ್ಕತ್ತ ನಗರಗಳಲ್ಲಿ ಕೇಂದ್ರೀಕೃತವಾಗಿವೆ. 1969ರಲ್ಲಿ ನೇಮಿಸಿದ ಪಾಂಡೆ ಅಧ್ಯಯನ ಸಮಿತಿ ಕೈಗಾರಿಕೀರಣದ ಆಧಾರದ ಮೇಲೆ ರಾಜ್ಯಗಳನ್ನು ಮೂರು ಭಾಗಗಳಾಗಿ ವಿಂಗಡಿಸಿತು: 1 ಕೈಗಾರಿಕೀಕರಣದ ದೃಷ್ಟಿಯಿಂದ ಹಿಂದುಳಿದ ರಾಜ್ಯಗಳಾದ ನಾಗಾಲ್ಯಾಂಡ್, ಜಮ್ಮು ಮತ್ತು ಕಾಶ್ಮೀರ, ಒರಿಸ್ಸ, ಉತ್ತರಪ್ರದೇಶ, ಅಸ್ಸಾಮ್, ಮಧ್ಯ ಪ್ರದೇಶ. ರಾಜಾಸ್ಥಾನ್, ಬಿಹಾರ ಮತ್ತು ಆಂಧ್ರಪ್ರದೇಶ; 2 ಮುಂದುವರಿಯುತ್ತಿರುವ ಕೇರಳ ಮತ್ತು ಕರ್ನಾಟಕ ರಾಜ್ಯಗಳು; 3 ಹರಿಯಾನ, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ಪಶ್ಚಿಮ ಬಂಗಾಲ. ಮುಂದುವರಿದ ಈ ಆರುರಾಜ್ಯಗಳು 1975-76ರಲ್ಲಿ ಒಟ್ಟು ಕಾರ್ಖಾನೆ ವಲಯದ ಶೇಕಡಾ 55.03ರಷ್ಟು ಕಾರ್ಖಾನೆಗಳನ್ನೂ ಶೇಕಡಾ 5646ರಷ್ಟು ಕೈಗಾರಿಕಾ ಉದ್ಯೋಗಾವಕಾಶಗಳನ್ನೂ ಶೇಕಡಾ 61.23ರಷ್ಟು ಉತ್ಪಾದನೆಯನ್ನೂ ಹೊಂದಿದ್ದು, ಇಲ್ಲಿ ಕೈಗಾರಿಕೆಗಳು ಕೇಂದ್ರೀಕೃತವಾಗಿವೆ ಎಂಬುದನ್ನು ತೋರಿಸಿ ಕೊಡುತ್ತವೆ. ಅಲ್ಲದೆ ಈ ರಾಜ್ಯಗಳು ಅಧಿಕ ಸಂಖ್ಯೆಯಲ್ಲಿ ಕೈಗಾರಿಕಾ ಪರವಾನೆಗಳನ್ನು ಪಡೆಯುತ್ತಿರುವುದಲ್ಲದೆ, ಪರವಾನೆಗಳ ಸಂಖ್ಯೆ ಏರುತ್ತಿರುವುದನ್ನು ಗಮನಿಸಿದರೆ ಭವಿಷ್ಯದಲ್ಲೂ ಕೈಗಾರಿಕೆಗಳು ಈ ರಾಜ್ಯಗಳಲ್ಲಿ ಕೇಂದ್ರೀಕೃತವಾಗುವ ಸಂಭವ ಕಂಡುಬರುತ್ತದೆ.

	ಕೈಗಾರಿಕೆಗಳ ಯೋಜನೆ: ಕೈಗಾರಿಕಾಭಿವೃದ್ಧಿಯನ್ನು ಕೇವಲ ಕಾರ್ಖಾನೆಗಳ ಸಂಖ್ಯೆ ಅಥವಾ ಅವುಗಳಲ್ಲಿ ಹೂಡಿದ ಬಂಡವಾಳದ ಬೆಳೆವಣಿಗೆಯಿಂದಲೇ ಅಳೆಯುವುದು ಸರಿಯಲ್ಲ. ಅವುಗಳ ಉತ್ಪಾದನಾ ಪ್ರಮಾಣದ ಪ್ರಗತಿ, ಉತ್ಪಾದನೆಯ ನಮೂನೆ ಹಾಗೂ ಉದ್ಯೋಗಾವಕಾಶಗಳ ನಿರ್ಮಾಣ-ಇವುಗಳಲ್ಲಿ ಉಂಟಾದ ಸಾಧನೆ ಕೈಗಾರಿಕಾ ಬೆಳೆವಣಿಗೆಯನ್ನು ಪ್ರತಿಫಲಿಸುತ್ತದೆ.

	ಆರ್ಥಿಕತೆಯ ಬೆಳೆವಣಿಗೆ ತೀವ್ರ ದರದಲ್ಲಾಗಬೇಕಾದರೆ ಮೂಲ ಹಾಗೂ ಬಂಡವಾಳ ಸರಕುಗಳ ಕೈಗಾರಿಕೆಗಳನ್ನು ಹೆಚ್ಚಾಗಿ ಸ್ಥಾಪಿಸಬೇಕೆಂಬುದು ಸಹಜ. ಈ ಕಾರಣದಿಂದ ಎರಡನೆಯ ಯೋಜನೆಯಿಂದಾಚೆಗೆ ಕೈಗಾರಿಕೆಗಳು ಅಗ್ರತೆ ಪಡೆದುವು. ಹೀಗಾಗಿ ಇಲ್ಲಿಂದಾಚೆ ಗ್ರಾಹಕ ಸರಕು ಕೈಗಾರಿಕೆಗಳಿಗೆ ಹೋಲಿಸದಂತೆ ಮೂಲ ಮತ್ತು ಬಂಡವಾಳ ಸರಕುಗಳ ಕೈಗಾರಿಕೆಗಳ ಬೆಳೆವಣಿಗೆಗೆ ಅಧಿಕ ಹೂಟೆಯನ್ನು ನಿಯತಮಾಡಲಾಯಿತು. ಇದರಿಂದಾಗಿ ಆವಿ ಅಧಿಕ ದರದಲ್ಲಿ ಬೆಳೆಯಲಾರಂಭಿಸಿದುವು. 1960-1972. 1970-1978ರ ಅವಧಿಗಳಲ್ಲಿ ಅನುಭೋಗ ಸರಕು ಕೈಗಾರಿಕೆಗಳ ಉತ್ಪಾದನೆ ಅನುಕ್ರಮವಾಗಿ ಶೇಕಡಾ 68.2 ಶೇಕಡಾ 43.1ರಷ್ಟು ಏರಿಕೆ ತೋರಿತು. ಮೂಲಕೈಗಾರಿಕೆಗಳಲ್ಲಿ ಶೇಕಡಾ 154.3 ಮತ್ತು ಶೇಕಡಾ 55.8 ಬಂಡವಾಳ ಸರಕು ಕೈಗಾರಿಕೆಗಳಲ್ಲಿ ಶೇಕಡಾ 143.5 ಮತ್ತು ಶೇಕಡಾ 56.8 ಹಾಗೂ ಮಧ್ಯಂತರ ಸರಕು ಕೈಗಾರಿಕೆಗಳಲ್ಲಿ ಶೇಕಡಾ 71.2 ಮತ್ತು ಶೇಕಡಾ 36.6 ಏರಿಕೆಗಳು ಆದುವು. ಕೈಗಾರಿಕೆಗಳ ಯೋಜನಾ ಕಾರ್ಯಗತಿಯಿಂದ ಕೈಗಾರಿಕೋತ್ಪಾದನೆಯ ನಮೂನೆ ಮೂಲ ಸರಕು ಹಾಗೂ ಬಂಡವಾಳ ಸರಕುಗಳ ಪರವಾಗಿ ಬದಲಾಯಿಸಿದೆ.

	ಮೂಲ ಮತ್ತು ಬಂಡವಾಳ ಸರಕು ಕೈಗಾರಿಕೆಗಳ ಹೆಚ್ಚಿನ ದರದ ಬೆಳೆವಣಿಗೆ ಕೈಗಾರಿಕಾ ಸಂರಚನೆಯ ಮೇಲೂ ಪ್ರಭಾವ ಬೀರಿದೆ. ಸ್ವಭಾವತಃ ಈ ಕೈಗಾರಿಕೆಗಳು ದೊಡ್ಡ ಗಾತ್ರದವಾದ್ದರಿಂದ ಇವುಗಳ ಅಧಿಕ ಬೆಳೆವಣಿಗೆ ದೊಡ್ಡ ಮತ್ತು ಸಣ್ಣ ಕೈಗಾರಿಕೆಗಳ ಸಾಪೇಕ್ಷ ಬೆಳೆವಣಿಗೆಯ ಮೇಲೆ ಪರಿಣಾಮ ಉಂಟುಮಾಡಿದೆ. ಹೀಗೆ 1950-51 ಮತ್ತು 1969-70 ಅವಧಿಯಲ್ಲಿ ದೊಡ್ಡ ಕೈಗಾರಿಕೆಗಳ ಉತ್ಪಾದನ ಮೌಲ್ಯ ಶೇಕಡಾ 451.46ರಷ್ಟು ಏರಿದರೆ ಸಣ್ಣ ಕೈಗಾರಿಕೆಗಳ ಉತ್ಪಾದನ ಮೌಲ್ಯ ಕೇವಲ ಶೇಕಡಾ 186.16ರಷ್ಟು ಏರಿತು. ಈ ಕಾರಣದಿಂದ ಉತ್ಪಾದನ ಮೌಲ್ಯದಲ್ಲಿ ಸಣ್ಣ ಕೈಗಾರಿಕೆಗಳ ಪಾಲು ಕ್ರಮೇಣ ಇಳಿಯುತ್ತಿದೆ.
(ಎಬಿ.ಎ.;ಪಿಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ